ಡೀಪ್‌ಫೇಕ್‌ ವಿರುದ್ಧ ಜಾಗತಿಕ ಸಮರ ಅಗತ್ಯ: ಮೋದಿ

| Published : Nov 23 2023, 01:45 AM IST

ಸಾರಾಂಶ

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚುತ್ತಿರುವ ಡೀಪ್‌ಫೇಕ್‌ ವಿಡಿಯೋಗಳು ಹಾಗೂ ಫೋಟೋಗಳ ಹಾವಳಿ ಬಗ್ಗೆ ಮತ್ತೆ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಡೀಪ್‌ಫೇಕ್‌ ವಿರುದ್ಧ ಎಲ್ಲರೂ ಒಟ್ಟಾಗಿ ಸಮರ ಸಾರಬೇಕು ಹಾಗೂ ಜಗತ್ತಿನ ಎಲ್ಲ ದೇಶಗಳು ಸೇರಿಕೊಂಡು ಕೃತಕ ಬುದ್ಧಿಮತ್ತೆಯ ದುರ್ಬಳಕೆಗೆ ನಿಯಂತ್ರಣ ಹೇರಬೇಕು’ ಎಂದು ಜಾಗತಿಕ ನಾಯಕರಿಗೆ ಒತ್ತಾಯಿಸಿದ್ದಾರೆ.

ಕೃತಕ ಬುದ್ಧಿಮತ್ತೆ ಸಮಾಜದ ಒಳಿತಿಗೆ ಬಳಕೆ ಆಗಬೇಕು

ದುರ್ಬಳಕೆ ತಡೆಗೆ ಜಗತ್ತು ಒಂದಾಗಬೇಕು: ಜಿ20 ವರ್ಚುವಲ್‌ ಶೃಂಗದಲ್ಲಿ ಕರೆ

ನವದೆಹಲಿ: ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚುತ್ತಿರುವ ಡೀಪ್‌ಫೇಕ್‌ ವಿಡಿಯೋಗಳು ಹಾಗೂ ಫೋಟೋಗಳ ಹಾವಳಿ ಬಗ್ಗೆ ಮತ್ತೆ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಡೀಪ್‌ಫೇಕ್‌ ವಿರುದ್ಧ ಎಲ್ಲರೂ ಒಟ್ಟಾಗಿ ಸಮರ ಸಾರಬೇಕು ಹಾಗೂ ಜಗತ್ತಿನ ಎಲ್ಲ ದೇಶಗಳು ಸೇರಿಕೊಂಡು ಕೃತಕ ಬುದ್ಧಿಮತ್ತೆಯ ದುರ್ಬಳಕೆಗೆ ನಿಯಂತ್ರಣ ಹೇರಬೇಕು’ ಎಂದು ಜಾಗತಿಕ ನಾಯಕರಿಗೆ ಒತ್ತಾಯಿಸಿದ್ದಾರೆ.

ಜಿ20 ವರ್ಚುವಲ್‌ ಶೃಂಗದಲ್ಲಿ ಬುಧವಾರ ಸಂಜೆ ಮಾತನಾಡಿದ ಅವರು, ‘ಸಮಾಜಕ್ಕೆ ಅದರ ಸುರಕ್ಷತೆಯನ್ನು ಖಾತರಿಪಡಿಸುವ ಜತೆಗೆ ಕೃತಕ ಬುದ್ಧಿಮತ್ತೆಯ ಲಾಭ ಎಲ್ಲರಿಗೂ ಆಗುವಂತೆ ನೋಡಿಕೊಳ್ಳಬೇಕು. ಆದರೆ, ಕೃತಕ ಬುದ್ಧಿಮತ್ತೆಯ ಋಣಾತ್ಮಕ ಬಳಕೆಯೇ ಪ್ರಪಂಚದಾದ್ಯಂತ ಹೆಚ್ಚುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಈ ಹಂತದಲ್ಲಿ ಡೀಪ್‌ಫೇಕ್‌ ಬಗ್ಗೆ ಪ್ರಸ್ತಾಪಿಸಿದ ಅವರು, ‘ಕೃತಕ ಬುದ್ಧಿಮತ್ತೆಯ (ಎಐ) ಋಣಾತ್ಮಕ ಪರಿಣಾಮಗಳ ಬಗ್ಗೆ ಜಗತ್ತು ಚಿಂತಿತವಾಗಿದೆ. ಎಐಗಾಗಿ ಜಾಗತಿಕ ನಿಯಮಗಳನ್ನು ರೂಪಿಸಿ ನಾವು ಒಟ್ಟಾಗಿ ಕೆಲಸ ಮಾಡಬೇಕು ಎಂದು ಭಾರತ ಆಶಿಸುತ್ತದೆ. ಕೃತಕ ಬುದ್ಧಿಮತ್ತೆ ದುರ್ಬಳಕೆ ಮಾಡಿಕೊಂಡು ಡೀಪ್‌ಫೇಕ್‌ ಸೃಷ್ಟಿಸಲಾಗುತ್ತಿದ್ದು, ಡೀಪ್‌ಫೇಕ್‌ಗಳು ಸಮಾಜ ಮತ್ತು ವ್ಯಕ್ತಿಗಳಿಗೆ ಎಷ್ಟು ಅಪಾಯಕಾರಿ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಹೀಗಾಗಿ ನಾವು ಈ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ’ ಎಂದರು.

‘ಡೀಪ್‌ಫೇಕ್’ ಸೃಷ್ಟಿಸಲು ಕೃತಕ ಬುದ್ಧಿಮತ್ತೆಯ ಬಳಕೆಯ ಬಗ್ಗೆ ಪ್ರಧಾನಿ ಇತ್ತೀಚೆಗೆ ಕೂಡ ಕಳವಳ ವ್ಯಕ್ತಪಡಿಸಿದ್ದರು.

ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ, ಕತ್ರೀನಾ ಕೈಫ್‌, ಸಾರಾ ತೆಂಡೂಲ್ಕರ್‌, ಕಾಜೋಲ್‌ ಸೇರಿ ಅನೇಕರ ಡೀಪ್‌ಫೇಕ್‌ ಫೋಟೋ/ವಿಡಿಯೋಗಳನ್ನು ಸೃಷ್ಟಿಸಲಾಗಿತ್ತು. ಬೇರೆಯವರ ದೇಹಕ್ಕೆ ಈ ಗಣ್ಯರ ಮುಖ ಅಂಟಿಸಿ ಸಂದೇಹ ಬಾರದಂತೆ ನಕಲಿ ವಿಡಿಯೋ/ಫೋಟೋ ರೂಪಿಸಲಾಗಿತ್ತು. ಹೀಗೆ ಮಾಡಲು ಬಳಸಲಾಗುವ ತಂತ್ರಜ್ಞಾನಕ್ಕೆ ಡೀಪ್‌ಫೇಕ್‌ ಎನ್ನುತ್ತಾರೆ.

ಇಸ್ರೇಲ್‌-ಹಮಾಸ್‌ ಯುದ್ಧ ವ್ಯಾಪಿಸಬಾರದು: ಮೋದಿ

ನವದೆಹಲಿ: ‘ಇಸ್ರೇಲ್-ಹಮಾಸ್ ಯುದ್ಧವು ಪ್ರಾದೇಶಿಕ ಸಂಘರ್ಷದ ರೂಪ ಪಡೆಯದಂತೆ ನಾವೆಲ್ಲರೂ ನೋಡಿಕೊಳ್ಳಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಜಿ20 ವರ್ಚುವಲ್‌ ಶೃಂಗದಲ್ಲಿ ಕೊನೆಯ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ‘ಪಶ್ಚಿಮ ಏಷ್ಯಾದಲ್ಲಿ ಅಭದ್ರತೆಯ ಆತಂಕ ಕಾಡುತ್ತಿದೆ. ಆದರೆ ಇಸ್ರೇಲ್-ಹಮಾಸ್ ಯುದ್ಧವು ಪ್ರಾದೇಶಿಕ ಸಂಘರ್ಷದ ಸ್ವರೂಪ ಪಡೆಯುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇಸ್ರೇಲ್‌-ಹಮಾಸ್‌ ಪರಸ್ಪರ ಒತ್ತೆಯಾಳುಗಳ ಬಿಡುಗಡೆ ಘೋಷಣೆ ಮಾಡಿದ್ದನ್ನುಮೋದಿ ಸ್ವಾಗತಿಸಿದರು.

ಭಯೋತ್ಪಾದನೆ ಯಾರಿಗೂ ಸ್ವೀಕಾರಾರ್ಹವಲ್ಲ ಎಂದು ಹೇಳಿದ ಮೋದಿ, ಅದು ಎಲ್ಲೇ ಇದ್ದರೂ ನಾಗರಿಕರ ಸಾವು ಖಂಡನೀಯ ಎಂದು ಪ್ರತಿಪಾದಿಸಿದರು.