ಎಲಾನ್‌ ಮಸ್ಕ್‌ ಆಸ್ತಿ ಈಗ ₹100 ಲಕ್ಷ ಕೋಟಿ । ಇದು ಭಾರತದ ಬಜೆಟ್‌ನ 2, ಕರ್ನಾಟಕ ಬಜೆಟ್‌ನ 25 ಪಟ್ಟು

==

ಟ್ರಿಲಿಯನೇರ್‌ ಹಾದಿ

2012₹19000 ಕೋಟಿ

2016₹10 ಲಕ್ಷ ಕೋಟಿ


2021₹15 ಲಕ್ಷ ಕೋಟಿ

2024₹38 ಲಕ್ಷ ಕೋಟಿ

2025₹65 ಲಕ್ಷ ಕೋಟಿ

2026₹100 ಲಕ್ಷ ಕೋಟಿನ್ಯೂಯಾರ್ಕ್‌: ವಿಶ್ವದ ನಂ.1 ಶ್ರೀಮಂತ ಎಂಬ ಹಿರಿಮೆ ಹೊಂದಿದ್ದ ಟೆಸ್ಲಾ, ಸ್ಪೇಸ್ ಎಕ್ಸ್‌ ಮೊದಲಾದ ಕಂಪನಿಗಳ ಮಾಲೀಕ ಎಲಾನ್‌ ಮಸ್ಕ್‌, ಶುಕ್ರವಾರ ವಿಶ್ವದ ಮೊದಲ ಟ್ರಿಲಿಯನೇರ್‌ (1 ಲಕ್ಷ ಕೋಟಿ ಡಾಲರ್‌ ಒಡೆಯ) ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಮಸ್ಕ್‌ರ ಸ್ಪೇಸ್‌ ಎಕ್ಸ್‌ ಕಂಪನಿ ಶುಕ್ರವಾರ ಅಮೆರಿಕದ ಷೇರುಪೇಟೆ ಪ್ರವೇಶ ಮಾಡಿದ್ದು, ಷೇರುಗಳು ಮೂಲದರಕ್ಕಿಂತ ಶೇ.11ರಷ್ಟು ಹೆಚ್ಚು ದರಕ್ಕೆ ಲಿಸ್ಟ್‌ ಆಗುವುದರೊಂದಿಗೆ ಕಂಪನಿಯ ಮಾರುಕಟ್ಟೆ ಮೌಲ್ಯ 200 ಲಕ್ಷ ಕೋಟಿ ರು. ತಲುಪಿದೆ. ಈ ಮೂಲಕ ಮಸ್ಕ್‌ರ ಆಸ್ತಿ ಮೌಲ್ಯ 100 ಲಕ್ಷ ಕೋಟಿ ರು. ದಾಟಿದೆ. ಇದು ಭಾರತ ಸರ್ಕಾರದ ವಾರ್ಷಿಕ ಬಜೆಟ್‌ನ 2 ಪಟ್ಟು, ಕರ್ನಾಟಕ ಸರ್ಕಾರದ ಬಜೆಟ್‌ನ ಅಂದಾಜು 25 ಪಟ್ಟು ಎಂಬುದು ವಿಶೇಷ. ಇದುವರೆಗೆ ಭೂಮಿಯ ಮೇಲಿನ ಯಾವುದೇ ವ್ಯಕ್ತಿ ಕೂಡಾ ಇಷ್ಟು ಆಸ್ತಿ ಹೊಂದಿರಲಿಲ್ಲ.

ಬಾಹ್ಯಾಕಾಶ ಪ್ರಯಾಣದ ವೆಚ್ಚ ಕಡಿತದ ಉದ್ದೇಶದೊಂದಿಗೆ 2002ರಲ್ಲಿ ಸ್ಪೇಸ್ ಎಕ್ಸ್‌ ಕಂಪನಿ ಸ್ಥಾಪಿಸಿದ್ದ ಮಸ್ಕ್‌, ನಂತರದಲ್ಲಿ ಕಂಪನಿಯ ಕಾರ್ಯಕ್ಷೇತ್ರವನ್ನು ಮರುಬಳಕೆ ರಾಕೆಟ್‌, ಉಪಗ್ರಹ ಆಧರಿತ ಇಂಟರ್ನೆಟ್‌, ಎಐ, ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್‌ ಜೊತೆಗಿನ ಒಪ್ಪಂದಗಳಿಗೂ ವಿಸ್ತರಿಸಿದ್ದರು. ಹೀಗಾಗಿ ಅವರ ಕಂಪನಿ ಮೇಲಿನ ಜನರ ನಿರೀಕ್ಷೆ ಹೆಚ್ಚಾಗಿದೆ.

ಅದರ ಬೆನ್ನಲ್ಲೇ ವಿವಿಧ ವಲಯಗಳಲ್ಲಿ ಮತ್ತಷ್ಟು ಹೂಡಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಸ್ಪೇಸ್‌ ಕಂಪನಿಯ 55 ಕೋಟಿ ಷೇರುಗಳನ್ನು ತಲಾ 135 ಡಾಲರ್‌ನಂತೆ ಷೇರುಪೇಟೆಗೆ ಬಿಡುಗಡೆ ಮಾಡಿದ್ದರು. ಉತ್ತಮ ಪ್ರತಿಕ್ರಿಯೆ ಕಾರಣ ಸ್ಪೇಸ್‌ ಎಕ್ಸ್‌ ಷೇರುಗಳು ಮೂಲಬೆಲೆಗಿಂತ ಶೇ.11ರಷ್ಟು ಹೆಚ್ಚು ಅಂದರೆ 150 ಡಾಲರ್‌ಗೆ ಲಿಸ್ಟ್‌ ಆಗುವ ಮೂಲಕ ಕಂಪನಿಯ ಮಾರುಕಟ್ಟೆ ಮೌಲ್ಯ 2 ಲಕ್ಷ ಕೋಟಿ ಡಾಲರ್‌ ದಾಟಿದೆ. ಸ್ಪೇಸ್ ಎಕ್ಸ್‌ನಲ್ಲಿ ಮಸ್ಕ್‌ ಶೇ.42-ಶೇ.46ರಷ್ಟು ಷೇರು ಹೊಂದಿದ್ದಾರೆ. ಇದರ ಜತೆಗೆ ಟೆಸ್ಲಾ ಸೇರಿ ಇತರೆ ಕಂಪನಿಗಳಲ್ಲಿ ಷೇರು ಮತ್ತು ಅವುಗಳಲ್ಲಿನ ಅವರ ಪಾಲು ಸೇರಿದರೆ ಮಸ್ಕ್‌ ಆಸ್ತಿ ಮೌಲ್ಯ 100 ಲಕ್ಷ ಕೋಟಿ ರು. ದಾಟಿದೆ.