ಎಚ್‌1ಬಿ ವೀಸಾ ಎಂದರೆ ನನಗಿಷ್ಟ: ದಿಢೀರ್‌ ನಿಲುವು ಬದಲಿಸಿಕೊಂಡ ಡೊನಾಲ್ಡ್‌ ಟ್ರಂಪ್‌

| Published : Dec 30 2024, 01:00 AM IST / Updated: Dec 30 2024, 04:05 AM IST

ಸಾರಾಂಶ

ಅಮೆರಿಕ ಚುನಾವಣೆ ಪ್ರಚಾರ ವೇಳೆ, ‘ವಲಸಿಗರ ನಿಯಂತ್ರಣಕ್ಕೆ ಕ್ರಮ ಜರುಗಿಸಲಾಗುವುದು’ ಎಂದಿದ್ದ ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈಗ ದಿಢೀರ್‌ ನಿಲುವು ಬದಲಿಸಿಕೊಂಡಿದ್ದಾರೆ.

ವಾಷಿಂಗ್ಟನ್‌: ಅಮೆರಿಕ ಚುನಾವಣೆ ಪ್ರಚಾರ ವೇಳೆ, ‘ವಲಸಿಗರ ನಿಯಂತ್ರಣಕ್ಕೆ ಕ್ರಮ ಜರುಗಿಸಲಾಗುವುದು’ ಎಂದಿದ್ದ ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈಗ ದಿಢೀರ್‌ ನಿಲುವು ಬದಲಿಸಿಕೊಂಡಿದ್ದಾರೆ. ವಲಸಿಗರ ವೀಸಾ ಆದ ‘ಎಚ್‌1ಬಿ’ ವೀಸಾ ಪರ ಅವರ ಆಪ್ತರಾದ ಎಲಾನ್‌ ಮಸ್ಕ್‌ ಹಾಗೂ ವಿವೇಕ್‌ ರಾಮಸ್ವಾಮಿ ಬ್ಯಾಟ್‌ ಬೀಸುತ್ತಿದ್ದಂತೆಯೇ ಟ್ರಂಪ್‌ ಅವರು ‘ಎಚ್‌1ಬಿ ವೀಸಾ ಎಂದೆ ನನಗೆ ಇಷ್ಟ. ನಾನು ಯಾವಾಗಲೂ ಎಚ್‌1ಬಿ ವೀಸಾ ಪರ’ ಎಂದು ಹೇಳಿಕೆ ನೀಡಿದ್ದಾರೆ.

ಟ್ರಂಪ್‌ ಅವರು ಚುನಾವಣೆ ಪ್ರಚಾರದಲ್ಲಿ, ‘ಎಚ್‌1ಬಿ ವೀಸಾದಿಂದ ಅಮೆರಿಕನ್ನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಅವರ ಜಾಗಕ್ಕೆ ವಿದೇಶಿಗರು ಬರುತ್ತಿದ್ದಾರೆ. ಹೀಗಾಗಿ ಅಧಿಕಾರಕ್ಕೆ ಬಂದ ಮೇಲೆ ವಲಸೆಯನ್ನು ನಿಯಂತ್ರಣ ಮಾಡುತ್ತೇನೆ’ ಎಂದಿದ್ದರು. ಈ ಮೂಲಕ ಎಚ್‌1ಬಿ ವೀಸಾ ನಿಯಂತ್ರಣದ ಸುಳಿವು ನೀಡಿದ್ದರು.

ಆದರೆ ಕಳೆದ 2-3 ದಿನದಿಂದ ಟ್ರಂಪ್‌ ಅವರ ಪಾಳಯದಲ್ಲಿ ಎಚ್1ಬಿ ವೀಸಾ ಪರ ಹಾಗೂ ವಿರುದ್ಧ ಸಂಘರ್ಷ ಆರಂಭವಾಗಿತ್ತು. ಟ್ರಂಪ್‌ ಗೆಲುವಿಗೆ ಅತೀವವಾಗಿ ಶ್ರಮಿಸಿದ್ದ ಜಗತ್ತಿನ ನಂ.1 ಶ್ರೀಮಂತ ಎಲಾನ್‌ ಮಸ್ಕ್, ಅವರು ಎಚ್‌1ಬಿ ವೀಸಾ ಟೀಕಿಸಿದ್ದ ಒಬ್ಬರನ್ನು ಟ್ವೀಟರ್‌ನಲ್ಲಿ ತರಾಟೆಗೆ ತೆಗೆದುಕೊಂಡು, ‘ಎಚ್‌1ಬಿ ವೀಸಾ ಇಲ್ಲದಿದ್ದರೆ ನಾನು ಅಮೆರಿಕಕ್ಕೆ ಬರುತ್ತಿರಲಿಲ್ಲ. ಇಲ್ಲಿ ಸ್ಪೇಸ್‌ ಎಕ್ಸ್‌, ಟೆಸ್ಲಾ ಸೇರಿ ದೊಡ್ಡ ದೊಡ್ಡ ಕಂಪನಿಗಳೇ ಇರುತ್ತಿರಲಿಲ್ಲ. ಕೌಶಲ್ಯಯುತ ವಿದೇಶಿಗರಿಂದಲೇ ಈ ಕಂಪನಿಗಳು ತಲೆ ಎತ್ತಿ ಅಮೆರಿಕವನ್ನು ವಿಶ್ವದಲ್ಲಿಯೇ ಶ್ರೇಷ್ಠ ದೇಶವನ್ನಾಗಿ ಮಾಡಿದ್ದು’ ಎಂದು ಶನಿವಾರ ಹೇಳಿದ್ದರು.

ಇದಕ್ಕೆ ಟ್ರಂಪ್‌ ರಾಜಕೀಯ ಕಾರ್ಯದರ್ಶಿ ‘ಮಸ್ಕ್‌ ಒಬ್ಬ ಬಾಲಕ’ ಎಂದು ಟೀಕಿಸಿದ್ದರು. ಇದಕ್ಕೆ ಕುಪಿತಗೊಂಡಿದ್ದ ಮಸ್ಕ್‌ ‘ಎಚ್‌1ಬಿ ವೀಸಾ ವಿಚಾರವಾಗಿ ಯುದ್ಧಕ್ಕೂ ಸಿದ್ಧ’ ಎಂದು ಅವಾಚ್ಯ ಶನ್ಡ ಬಳಸಿದ್ದರು. ಈ ನಡುವೆ ವಿವೇಕ್‌ ರಾಮಸ್ವಾಮಿ ಸಹ ಮಸ್ಕ್‌ ಬೆಂಬಲಕ್ಕೆ ನಿಂತರು.

ಇದಕ್ಕೆ ಭಾನುವಾರ ನ್ಯೂಯಾರ್ಕ್‌ ಪೋಸ್ಟ್‌ ಜತೆ ಮಾತನಾಡಿರುವ ಟ್ರಂಪ್‌, ‘ನಾನು ಯಾವಾಗಲೂ ಎಚ್‌1ಬಿ ವೀಸಾಗಳನ್ನು ಇಷ್ಟಪಡುತ್ತೇನೆ, ನಾನು ಯಾವಾಗಲೂ ವೀಸಾಗಳ ಪರವಾಗಿರುತ್ತೇನೆ. ಅದಕ್ಕಾಗಿಯೇ ನಾವು ಆ ವೀಸಾದಾರ ಉದ್ಯೋಗಿಗಳನ್ನು ಅಮೆರಿಕದಲ್ಲಿ ಹೊಂದಿದ್ದೇವೆ. ನಾನು ಎಚ್‌1ಬಿ ವೀಸಾದಲ್ಲಿ ನಂಬಿಕೆ ಇಟ್ಟ ವ್ಯಕ್ತಿ. ನಾನು ಅದನ್ನು ಅನೇಕ ಬಾರಿ ಬಳಸಿದ್ದೇನೆ. ಅದೊಂದು ‘ಗ್ರೇಟ್‌ ಪ್ರೋಗ್ರಾಂ’ (ಅತ್ಯುತ್ತಮ ಯೋಜನೆ)’ ಎಂದು ಬಣ್ಣಿಸಿದ್ದಾರೆ ಹಾಗೂ ಚುನಾವಣೆಯಲ್ಲಿನ ತಮ್ಮ ಎಚ್1ಬಿ ವಿರೋಧಿ ನಿಲುವಿನಿಂದ ಹಿಂದೆ ಸರಿದಿದ್ದಾರೆ.

ಏನಿದು ಎಚ್1ಬಿ ವೀಸಾ?

ಅಮೆರಿಕಕ್ಕೆ ಐಟಿ ವಲಯ ಸೇರಿ ಹಲವು ವಲಯಗಳಲ್ಲಿ ಭಾರತ ಸೇರಿದಂತೆ ಅನೇಕ ದೇಶಗಳ ಜನರು ನೌಕರಿಗೆ ತೆರಳುತ್ತಾರೆ. ಇವರಿಗೆ ನೀಡುವ ವೀಸಾಗೆ ಎಚ್1ಬಿ ವೀಸಾ ಎನ್ನುತ್ತಾರೆ. ಇದನ್ನು ಲಕ್ಷಾಂತರ ಭಾರತೀಯರು ಹೊಂದಿದ್ದು, ಅಮೆರಿಕದಲ್ಲಿ ಉದ್ಯೋಗ ನಡೆಸುತ್ತಿದ್ದಾರೆ.