ಜಗತ್ತಿನ ಅತಿದೊಡ್ಡ ನಾಗರಿಕ ವಿಮಾನ ನಿರ್ಮಾಣ ಸಂಸ್ಥೆಯಾದ ಏರ್‌ಬಸ್, ಭಾರತ ಸೇರಿ ವಿಶ್ವಾದ್ಯಂತ 6000ಕ್ಕೂ ಹೆಚ್ಚು ಎ320 ವಿಮಾನಗಳ ಸಾಫ್ಟ್‌ವೇರ್ ಅಪ್ಡೇಟ್‌ಗೆ ಮುಂದಾಗಿದೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ವಿಮಾನ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.
ನವದೆಹಲಿ: ಜಗತ್ತಿನ ಅತಿದೊಡ್ಡ ನಾಗರಿಕ ವಿಮಾನ ನಿರ್ಮಾಣ ಸಂಸ್ಥೆಯಾದ ಏರ್‌ಬಸ್, ಭಾರತ ಸೇರಿ ವಿಶ್ವಾದ್ಯಂತ 6000ಕ್ಕೂ ಹೆಚ್ಚು ಎ320 ವಿಮಾನಗಳ ಸಾಫ್ಟ್‌ವೇರ್ ಅಪ್ಡೇಟ್‌ಗೆ ಮುಂದಾಗಿದೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ವಿಮಾನ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.
ವಿಮಾನ ಹಾರಾಡುತ್ತಿದ್ದಾಗ ಅನಿರೀಕ್ಷಿತವಾಗಿ ಕಾಣಿಸಿಕೊಳ್ಳುವ ತಾಂತ್ರಿಕ ಸಮಸ್ಯೆ ಮತ್ತು ಹಾರಾಟ ಸಂದರ್ಭದಲ್ಲಿ ದಿಢೀರ್ ಎತ್ತರ ಕುಸಿಯುವ ಘಟನೆಗಳು ಪದೇ ಪದೆ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಂಸ್ಥೆ ಈ ಕ್ರಮಕ್ಕೆ ಮುಂದಾಗಿದೆ. ಸಂಭಾವ್ಯ ಅಪಾಯಗಳ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗುತ್ತಿದ್ದು, ಸಾಫ್ಟ್‌ವೇರ್ ಅಪ್ಡೇಟ್ ಕಡ್ಡಾಯ ಎಂದು ಸಂಸ್ಥೆ ಹೇಳಿಕೊಂಡಿದೆ.
ಯಾಕೆ ಈ ಅಪ್ಡೇಟ್?
ಅ.30ರಂದು ಮೆಕ್ಸಿಕೋದಿಂದ ನ್ಯೂಯಾರ್ಕ್‌ಗೆ ಹೊರಟಿದ್ದ ಜೆಟ್‌ಬ್ಲೂ ಎ320 ವಿಮಾನದ ಎತ್ತರ ದಿಢೀರ್ ಕುಸಿದು 15 ಮಂದಿ ಗಾಯಗೊಂಡಿದ್ದರು. ಅಮೆರಿಕದ ರಾಷ್ಟ್ರೀಯ ಸಾರಿಗೆ ಮಂಡಳಿ ಪರಿಶೀಲನೆ ವೇಳೆ ಫ್ಲೈಟ್ ಕಂಟ್ರೋಲ್ ಕಂಪ್ಯೂಟರ್(ಇಎಲ್‌ಎಸಿ) ಸ್ವಿಚ್ ಬದಲಾವಣೆಯಿಂದಾಗಿ ಈ ಘಟನೆ ನಡೆದಿದೆ ಎಂಬುದು ಬೆಳಕಿಗೆ ಬಂದಿದೆ. ಈ ಕುರಿತ ವಿಶ್ಲೇಷಣೆ ವೇಳೆ ಕಂಪ್ಯೂಟರ್ ಕೋಡ್‌ನಲ್ಲಿ ವ್ಯತ್ಯಾಸ ಆಗಿರುವುದು ಪತ್ತೆಯಾಗಿದ್ದು, ಇದಕ್ಕೆ ಇತ್ತೀಚೆಗಿನ ಸಾಫ್ಟ್‌ವೇರ್ ಅಪ್ಡೇಟ್ ಬಳಿಕ ಸೌರ ವಿಕಿರಣಗಳಿಂದ ಆಗುತ್ತಿರುವ ಅಡ್ಡಪರಿಣಾಮವೇ ಕಾರಣ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಏರ್‌ಬಸ್ ಸಂಸ್ಥೆ ಸಾಫ್ಟ್‌ವೇರ್ ಅಪ್ಡೇಟ್‌ಗೆ ಮುಂದಾಗಿದೆ.
ಭಾರತದಲ್ಲೂ ಆಗುತ್ತಿದೆ ಅಪ್ಡೇಟ್ ಆದ್ರೆ ಯಾವುದೇ ವಿಮಾನ ರದ್ದಿಲ್ಲ
ನವದೆಹಲಿ: ಭಾರತದಲ್ಲಿ 338 ಎ320 ಕುಟುಂಬದ ವಿಮಾನಗಳು ಕಾರ್ಯಾಚರಣೆಯಲ್ಲಿದ್ದು, ತುರ್ತು ಸಾಫ್ಟ್‌ವೇರ್ ಅಪ್ಡೇಟ್‌ನ ಅನಿವಾರ್ಯತೆ ಎದುರಿಸುತ್ತಿವೆ. ಆದರೆ, ಭಾರತದಲ್ಲಿ ಈ ಕಾರಣಕ್ಕೆ ಯಾವುದೇ ವಿಮಾನಗಳ ಸಂಚಾರ ರದ್ದಾಗುವುದಿಲ್ಲ, ಬದಲಾಗಿ 60ರಿಂದ 90 ನಿಮಿಷಗಳಷ್ಟು ಕಾಲ ಸಂಚಾರ ವಿಳಂಬ ಆಗಲಿದೆ ಎಂದು ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ತಿಳಿಸಿದೆ. ಈ 338ರಲ್ಲಿ 189 ಎ320 ಕುಟುಂಬದ ವಿಮಾನಗಳ ಸಾಫ್ಟ್‌ವೇರ್ ಅಪ್ಡೇಟ್ ಈಗಾಗಲೇ ಪೂರ್ಣಗೊಂಡಿದೆ ಎಂದು ಡಿಜಿಸಿಎ ತಿಳಿಸಿದೆ. ಭಾನುವಾರದ ಹೊತ್ತಿಗೆ ಉಳಿದ ವಿಮಾನಗಳ ಸಾಫ್ಟ್‌ವೇರ್ ಅಪ್ಡೇಟ್ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿದೆ.
