ಭಾರತಕ್ಕೆ ವಿಮಾನ ತಂತ್ರಜ್ಞಾನವನ್ನೇ ಕೊಡ್ತೀವಿ : ರಷ್ಯಾ!

| N/A | Published : Nov 21 2025, 01:00 AM IST / Updated: Nov 21 2025, 06:22 AM IST

Putin

ಸಾರಾಂಶ

ಒಂದು ಕಡೆ ಎಫ್‌-35 ಯುದ್ಧ ವಿಮಾನ ಮಾರಾಟ ಮಾಡಲು ಅಮೆರಿಕ ಪ್ರಯತ್ನ ನಡೆಸುತ್ತಿರುವಾಗಲೇ, ಇದೀಗ ಮಿತ್ರ ರಾಷ್ಟ್ರ ರಷ್ಯಾ 5ನೇ ತಲೆಮಾರಿನ ಎಸ್‌ಯು-57 ಯುದ್ಧವಿಮಾನವನ್ನು ಭಾರತಕ್ಕೆ ಮಾರಾಟ ಮಾಡಲು ಮುಂದೆ ಬಂದಿದೆ.

ನವದೆಹಲಿ: ಒಂದು ಕಡೆ ಎಫ್‌-35 ಯುದ್ಧ ವಿಮಾನ ಮಾರಾಟ ಮಾಡಲು ಅಮೆರಿಕ ಪ್ರಯತ್ನ ನಡೆಸುತ್ತಿರುವಾಗಲೇ, ಇದೀಗ ಮಿತ್ರ ರಾಷ್ಟ್ರ ರಷ್ಯಾ 5ನೇ ತಲೆಮಾರಿನ ಎಸ್‌ಯು-57 ಯುದ್ಧವಿಮಾನವನ್ನು ಭಾರತಕ್ಕೆ ಮಾರಾಟ ಮಾಡಲು ಮುಂದೆ ಬಂದಿದೆ. ಕೇವಲ ವಿಮಾನ ಮಾರಾಟ ಮಾತ್ರವಲ್ಲ, ಅತ್ಯಾಧುನಿಕ ಯುದ್ಧ ವಿಮಾನದ ಪೂರ್ಣ ತಂತ್ರಜ್ಞಾನ ವರ್ಗಾವಣೆಗೇ ಸಿದ್ಧ. ಯುದ್ಧ ವಿಮಾನದ ತಂತ್ರಜ್ಞಾನ ಸಂಬಂಧ ನಿಮಗೆ ಏನೇನು ಬೇಕೋ ಅದನ್ನೆಲ್ಲಾ ಕೊಡಲು ನಾವು ಸಿದ್ಧ ಎಂಬ ಕಂಡುಕೇಳರಿಯದ ಪ್ರಸ್ತಾಪವನ್ನು ಭಾರತದ ಮುಂದಿಟ್ಟಿದೆ ಎನ್ನಲಾಗಿದೆ.

ಮೊದಲ ಹಂತದಲ್ಲಿ ವಿಮಾನ ಮಾರಾಟ, ಬಳಿಕ ಭಾರತದಲ್ಲೇ ಉತ್ಪಾದನೆ

ಮೊದಲಿನ ಪ್ರಸ್ತಾಪದ ಪ್ರಕಾರ, ಮೊದಲ ಹಂತದಲ್ಲಿ ವಿಮಾನ ಮಾರಾಟ, ಬಳಿಕ ಭಾರತದಲ್ಲೇ ಉತ್ಪಾದನೆಯ ಪ್ರಸ್ತಾಪ ಇತ್ತು. ಆದರೆ ಇದೀಗ ಮೊದಲ ಹಂತದಲ್ಲೇ ಯುದ್ಧ ವಿಮಾನ ಪೂರ್ಣ ತಂತ್ರಜ್ಞಾನದ ಹಸ್ತಾಂತರದ ಪ್ರಸ್ತಾಪವನ್ನು ರಷ್ಯಾ ಮುಂದಿಟ್ಟಿದೆ. ಯಾವುದೇ ದೇಶವೊಂದು, ಯುದ್ಧ ವಿಮಾನದ ತಂತ್ರಜ್ಞಾನವನ್ನೇ ಈ ಮಟ್ಟಿಗೆ ಭಾರತಕ್ಕೆ ಹಸ್ತಾಂತರ ಮಾಡಲು ಮುಂದಾಗಿರುವುದು ಇದೇ ಮೊದಲು. ಒಂದು ವೇಳೆ ಒಂದು ವೇಳೆ ಭಾರತ ಇದಕ್ಕೇನಾದರೂ ಒಪ್ಪಿಗೆ ಸೂಚಿಸಿದರೆ, ಪಾಶ್ಟಿಮಾತ್ಯ ರಾಷ್ಟ್ರಗಳು ಪದೇ ಪದೆ ನಿರಾಕರಿಸುತ್ತಲೇ ಬಂದಿದ್ದ ತಂತ್ರಜ್ಞಾನ ಭಾರತದ ಕೈಸೇರಲಿದೆ. ಭಾರತದ ವೈಮಾನಿಕ ತಂತ್ರಜ್ಞಾನ ಅಭಿವೃದ್ಧಿಯ ದಿಕ್ಕೇ ಬದಲಾಗುವ ನಿರೀಕ್ಷೆ ಇದೆ ಎಂದು ರಕ್ಷಣಾ ತಜ್ಞರು ವಿಶ್ಲೇಷಿಸಿದ್ದಾರೆ.

ಡಿಸೆಂಬರ್‌ ತಿಂಗಳಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಭಾರತಕ್ಕೆ ಭೇಟಿ

ಡಿಸೆಂಬರ್‌ ತಿಂಗಳಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಎಸ್‌ಯು-57 ಯುದ್ಧ ವಿಮಾನ ಮಾರಾಟದ ಪ್ರಸ್ತಾಪ ಸಲ್ಲಿಸುವ ನಿರೀಕ್ಷೆ ಇದೆ. ಇದರ ಜತೆಗೆ ಸಿಂಗಲ್‌ ಎಂಜಿನ್‌ ಯುದ್ಧವಿಮಾನ ಎಸ್‌ಯು-75 ಚೆಕ್‌ ಮೇಟ್‌ ಅನ್ನೂ ಭಾರತಕ್ಕೆ ನೀಡಲು ರಷ್ಯಾ ಮುಂದೆ ಬಂದಿದೆ ಎಂದು ವರದಿಗಳು ಹೇಳಿವೆ.

Read more Articles on