ಸಾರಾಂಶ
ನ್ಯೂಯಾರ್ಕ್: ಅಮೆರಿಕ ಭೇಟಿಯ 2 ದಿನವಾದ ಭಾನುವಾರ ನ್ಯೂಯಾರ್ಕ್‌ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಇಲ್ಲಿ ಪ್ಯಾಲೆಸ್ತೀನ್ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್ ಅವರನ್ನು ಭೇಟಿ ಮಾಡಿದರು.
ಈ ವೇಳೆ ಗಾಜಾದಲ್ಲಿನ ಪ್ರಸಕ್ತ ಮಾನವೀಯ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ವಲಯದಲ್ಲಿ ಆದಷ್ಟು ಶೀಘ್ರ ಶಾಂತಿ ಮತ್ತು ಸ್ಥಿರತೆ ಮರುಸ್ಥಾಪನೆಗೆ ಭಾರತ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಇದೇ ವೇಳೆ ಉಭಯ ನಾಯಕರು ದ್ವಿಪಕ್ಷೀಯ ಸಂಬಂಧ ಸುಧಾರಣೆ ಬಗ್ಗೆಯೂ ಚರ್ಚೆ ನಡೆಸಿದರು. ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನದಿಂದಾಗಿ ಪ್ಯಾಲೆಸ್ತೀನ್ ಹಲವು ಸಮಯದಿಂದ ಜರ್ಝರಿತವಾಗಿದೆ.
==
ಹಮಾಸ್ ನಾಯಕ ಯಾಹ್ಯಾ ಸಿನ್ವರ್ ಹತ್ಯೆ?
ಟೆಲ್ ಅವೀವ್: ಇತ್ತೀಚೆಗೆ ಗಾಜಾದ ಮೇಲೆ ನಡೆದ ವಾಯುದಾಳಿಯಲ್ಲಿ ಹಮಾಸ್ ನಾಯಕ ಯಾಹ್ಯಾ ಸಿನ್ವರ್ ಸಾವನ್ನಪ್ಪಿರುವ ಬಗ್ಗೆ ಊಹಾಪೋಹಗಳು ಹಬ್ಬಿದೆ. ಈ ಕುರಿತು ಇಸ್ರೇಲ್ ಸೇನೆ ತನಿಖೆಗೆ ಮುಂದಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.ಸಿನ್ವರ್‌ನನ್ನು ಗುರಿಯಾಗಿಸಿಕೊಂಡು ನಿರ್ದಿಷ್ಟ ದಾಳಿ ನಡೆಸಿರುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲವಾದರೂ, ಹಮಾಸ್ ಉಗ್ರರ ಧೈರ್ಯ ಕುಂದಿಸಿ ತನ್ನ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವಂತೆ ಒತ್ತಡ ಹೇರಲು ಇಸ್ರೇಲ್ ಅಧಿಕಾರಿಗಳು ಮಾನಸಿಕ ಯುದ್ಧತಂತ್ರ ಹೆಣೆಯುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಸಿನ್ವರ್ ಸಾವನ್ನು ಇಸ್ರೇಲ್ ಢೃಡಪಡಿಸಿಲ್ಲ, ಅಂತೆಯೇ ನಿರಾಕರಿಸಿಯೂ ಇಲ್ಲ.
ಈ ಮುಂಚೆಯೂ ಸಿನ್ವರ್ ಸಾವಿನ ಬಗ್ಗೆ ವದಂತಿಗಳು ಹಬ್ಬಿದ್ದು, ಅದು ಸುಳ್ಳೆಂದು ಸಾಬೀತಾಗಿತ್ತು.