ಭಾರತದ ಪ್ರಧಾನಿ ನರೇಂದ್ರ ಮೋದಿ ಮಂತ್ರ : ಉಕ್ರೇನ್‌-ರಷ್ಯಾ ಯುದ್ಧ ನಿಲುಗಡೆಗೆ ಮಧ್ಯಸ್ಥಿಕೆ?

| Published : Sep 25 2024, 12:54 AM IST / Updated: Sep 25 2024, 08:32 AM IST

ಸಾರಾಂಶ

ಉಕ್ರೇನ್‌-ರಷ್ಯಾ ಯುದ್ಧ ನಿಲ್ಲಿಸಲು ಮಧ್ಯಸ್ಥಿಕೆ ವಹಿಸುವಂತೆ ರಷ್ಯಾ ಅಧ್ಯಕ್ಷ ಪುಟಿನ್‌ ಹೇಳಿಕೆ ನೀಡಿದ ಬೆನ್ನಲ್ಲೇ, ಪ್ರಧಾನಿ ಮೋದಿ ಅವರು ಉಕ್ರೇನ್‌ ಅಧ್ಯಕ್ಷ ಜೆಲೆನ್ಸ್ಕಿ ಅವರನ್ನು ಭೇಟಿ ಮಾಡಿ ಶಾಂತಿ ಸ್ಥಾಪನೆಗೆ ನೆರವು ನೀಡುವ ಭರವಸೆ ನೀಡಿದ್ದಾರೆ.

 ನ್ಯೂಯಾರ್ಕ್‌ : ‘ಉಕ್ರೇನ್‌-ರಷ್ಯಾ ಯುದ್ಧ ನಿಲ್ಲಿಸುವ ಸಂಬಂಧ ಮಧ್ಯಸ್ಥಿಕೆ ವಹಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಸೂಕ್ತ ವ್ಯಕ್ತಿ’ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಹೇಳಿಕೆ ನೀಡಿದ ಕೆಲವು ದಿನಗಳ ಬಳಿಕ ಮೋದಿ ಅವರು ಈ ವಿಷಯದಲ್ಲಿ ಪುನಃ ಶಾಂತಿಮಂತ್ರ ಪಠಿಸಿದ್ದಾರೆ. ಸೋಮವಾರ 3 ದಿನಗಳ ಅಮೆರಿಕ ಪ್ರವಾಸ ಮುಗಿಸಿದ ಮೋದಿ, ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್ಸ್ಕಿ ಅವರನ್ನು ಭೇಟಿ ಮಾಡಿ ಶಾಂತಿ ಸ್ಥಾಪನೆಗೆ ನೆರವು ನೀಡುವುದಾಗಿ ಹೇಳಿದ್ದಾರೆ.

ಇದು ಕಳೆದ 3 ತಿಂಗಳಲ್ಲಿ ಉಭಯ ನಾಯಕರ 3ನೇ ಭೇಟಿ ಆಗಿದೆ. ಕಳೆದ ತಿಂಗಳು ಮೋದಿ ಅವರು ಪುಟಿನ್‌ ಹಾಗೂ ಜೆಲೆನ್ಸ್ಕಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಶಾಂತಿ ಸ್ಥಾಪನೆಗೆ ಕರೆ ನೀಡಿದ್ದರು.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಪಾರ್ಶ್ವದಲ್ಲಿ ಜೆಲೆನ್ಸ್ಕಿಅವರನ್ನು ಮೋದಿ ಭೇಟಿ ಮಾಡಿದರು. ‘ಜೆಲೆನ್ಸ್ಕಿ ಅವರನ್ನು ಭೇಟಿ ಮಾಡಿದೆ. ರಾಜತಾಂತ್ರಿಕ ವಿಧಾನಗಳು, ಮಾತುಕತೆ ಮೂಲಕ ಸಂಘರ್ಷ ಕೊನೆಗಾಣಿಸಬೇಕು ಎಂಬ ವಿಷಯದಲ್ಲಿ ಭಾರತ ಸ್ಪಷ್ಟವಾಗಿದೆ. ಈ ಬಗ್ಗೆ ಎಲ್ಲ ನೆರವು ನೀಡಲು ನಾವು ಸಿದ್ಧ ಎಂಬ ಭರವಸೆ ನೀಡಿದ್ದೇನೆ’ ಎಂದು ಮಾತುಕತೆಯ ಬಳಿಕ ಮೋದಿ ತಿಳಿಸಿದ್ದಾರೆ.

‘ಕಳೆದ ತಿಂಗಳ ನನ್ನ ಉಕ್ರೇನ್‌ ಭೇಟಿಯ ವೇಳೆ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಸಲುವಾಗಿ ಕೈಗೊಂಡ ನಿರ್ಧಾರಗಳನ್ನು ಜಾರಿಗೊಳಿಸಲು ನಾವು ಬದ್ಧ. ಉಕ್ರೇನ್‌ ಸಂಘರ್ಷವನ್ನು ಆದಷ್ಟು ಬೇಗ ಕೊನೆಗೊಳಿಸುವ ನಿಟ್ಟಿನಲ್ಲಿ ಎಲ್ಲಾ ನೆರವು ನೀಡಲು ಸಿದ್ಧ’ ಎಂದೂ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರು ರಷ್ಯಾ ಅಧ್ಯಕ್ಷ ಪುಟಿನ್‌ರನ್ನು ಭೇಟಿ ಮಾಡಿ ಯುದ್ಧ ಸಂಬಂಧಿ ಚರ್ಚೆ ನಡೆಸಿದ್ದರು. ಸೋಮವಾರ ಮಾಡಿದ ವಿಶ್ವಸಂಸ್ಥೆ ಸಾಮಾನ್ಯ ಸಭೆ ಭಾಷಣದಲ್ಲೂ ಮೋದಿ ಯುದ್ಧ ನಿಲ್ಲಿಸುವ ಬಗ್ಗೆ ಕರೆ ನೀಡಿದ್ದರು.