ಸಾರಾಂಶ
ವಾಷಿಂಗ್ಟನ್: ಅಮೆರಿಕ ಸಂಸತ್ತಿನ ಜನ ಪ್ರತಿನಿಧಿಗಳ ಸಭೆಗೆ ನಡೆದ ಚುನಾವಣೆಯಲ್ಲಿ ಭಾರತ ಮೂಲದ 7 ಅಮೆರಿಕನ್ನರು ಜಯ ಸಾಧಿಸಿದ್ದು, ಅಲ್ಲಿನ ಸಂಸತ್ತಿನ ಭಾಗವಾಗಲಿದ್ದಾರೆ. ಇವರಲ್ಲಿ ಬೆಳಗಾವಿ ಮೂಲದ ಶ್ರೀ ಥಾಣೆದಾರ್ ಹಾಗೂ ಬೆಂಗಳೂರು ನಂಟಿನ ಸುಹಾಸ್ ಸುಬ್ರಹ್ಮಣ್ಯಂ ಪ್ರಮುಖರು.
ಇಷ್ಟೊಂದು ಜನ ಭಾರತೀಯರು ಅಮೆರಿಕ ಸಂಸತ್ತಿಗೆ ಆಯ್ಕೆ ಆಗಿದ್ದು ಇದೇ ಮೊದಲು. ಕಳೆದ ಸಲ ಐವರು ಆಯ್ಕೆ ಆಗಿದ್ದರು.ವೃತ್ತಿಯಲ್ಲಿ ವಕೀಲರಾಗಿರುವ ಡೆಮಾಕ್ರಟಿಕ್ ಪಕ್ಷದ ಸುಹಾಸ್ ಸುಬ್ರಹ್ಮಣ್ಯಂ, ವರ್ಜೀನಿಯಾ ಹಾಗೂ ಇಡೀ ಪೂರ್ವ ಕರಾವಳಿಯಿಂದ ಚುನಾಯಿತರಾದ ಮೊದಲ ಭಾರತೀಯ ಮೂಲದವರೆಂಬ ಇತಿಹಾಸ ಸೃಷ್ಟಿಸಿದ್ದಾರೆ. ಇವರು ಈ ಮೊದಲು ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದಾಗ ಶ್ವೇತಭವನದಲ್ಲಿ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಸುಬ್ರಹ್ಮಣ್ಯಂ ಅವರ ತಾಯಿ ಬೆಂಗಳೂರಿನವರಾಗಿರುವುದು ವಿಶೇಷ.
ಉಳಿದಂತೆ ಶ್ರೀ ಥಾಣೆದಾರ್ ಎಂಬ ಬೆಳಗಾವಿ ಮೂಲದ ಡೆಮಾಕ್ರಟ್ ಅಭ್ಯರ್ಥಿ ಮಿಶಿಗನ್ ಜಿಲ್ಲೆಯಿಂದ ಸಂಸತ್ತಿಗೆ 2ನೇ ಬಾರಿ ಮರು ಆಯ್ಕೆಯಾಗಿದ್ದಾರೆ.ಡೆಮಾಕ್ರಾಟ್ ಅಭ್ಯರ್ಥಿ ರಾಜಾ ಕೃಷ್ಣಮೂರ್ತಿ ಅವರು ಇಲಿನಾಯ್ಸ್ ಕ್ಷೇತ್ರದಿಂದ ಸತತ 5ನೇ ಬಾರಿ ಸಂಸತ್ ಪ್ರವೇಶಿಸಲಿದ್ದಾರೆ. ಅಂತೆಯೇ, ಅದೇ ಪಕ್ಷದ ಕ್ಯಾರ್ಲಿಫೋರ್ನಿಯಾ ಅಭ್ಯರ್ಥಿ ರೋ ಖನ್ನಾ ಹಾಗೂ ವಾಷಿಂಗ್ಟನ್‌ನಿಂದ ಪರಿಮಳಾ ಜಯಪಾಲ್ ಮರು ಆಯ್ಕೆಯಾಗಿದ್ದಾರೆ. ಅರಿಜೋನಾದಿಂದ ಡೆಮಾಕ್ರಾಟ್ ಡಾ.ಆಮಿಶ್ ಶಾ ಕೂಡ ಜಯಭೇರಿ ಬಾರಿಸಿದ್ದಾರೆ.
ಇವರ ಪೈಕಿ ಕ್ಯಾರ್ಲಿಫೋರ್ನಿಯಾದಿಂದ ಸತತ 7ನೇ ಬಾರಿಗೆ ಸಂಸತ್ ಪ್ರವೇಶಿಸಲಿರುವ ಡೆಮಾಕ್ರಟಿಕ್ ಪಕ್ಷದ ಡಾ. ಅಮೀ ಬೆರಾ ಭಾರತ ಮೂಲದ ಹಿರಿಯ ಸಂಸದರಾಗಿದ್ದಾರೆ.