ಪಿಒಕೆನಲ್ಲಿ ಪಹಲ್ಗಾಂ ಉಗ್ರನ ಸಾಂಕೇತಿಕ ಅಂತ್ಯಕ್ರಿಯೆ!

| N/A | Published : Aug 04 2025, 12:30 AM IST / Updated: Aug 04 2025, 09:43 AM IST

ಸಾರಾಂಶ

ಜೂ.28ರಂದು ಕಾಶ್ಮೀರದಲ್ಲಿ ರಕ್ಷಣಾ ಪಡೆಗಳ ಗುಂಡಿಗೆ ಬಲಿಯಾದ ಮೂವರು ಪಹಲ್ಗಾಂ ದಾಳಿಕೋರರಲ್ಲಿ ಒಬ್ಬನಾದ ಲಷ್ಕರ್‌ ಭಯೋತ್ಪಾದಕ ಸಂಘಟನೆಯ ತಾಹಿರ್‌ ಹಬೀಬ್‌ ಅಲಿಯಾಸ್ ಜಿಬ್ರಾನ್‌ನ ಸಾಂಕೇತಿಕ ಶವಸಂಸ್ಕಾರ ಹಾಗೂ ಶ್ರದ್ಧಾಂಜಲಿ ಸಭೆಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಆತನ ತವರೂರಲ್ಲಿ ನಡೆಸಲಾಗಿದೆ.

 ನವದೆಹಲಿ: ಜೂ.28ರಂದು ಕಾಶ್ಮೀರದಲ್ಲಿ ರಕ್ಷಣಾ ಪಡೆಗಳ ಗುಂಡಿಗೆ ಬಲಿಯಾದ ಮೂವರು ಪಹಲ್ಗಾಂ ದಾಳಿಕೋರರಲ್ಲಿ ಒಬ್ಬನಾದ ಲಷ್ಕರ್‌-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ ತಾಹಿರ್‌ ಹಬೀಬ್‌ ಅಲಿಯಾಸ್ ಜಿಬ್ರಾನ್‌ನ ಸಾಂಕೇತಿಕ ಶವಸಂಸ್ಕಾರ ಹಾಗೂ ಶ್ರದ್ಧಾಂಜಲಿ ಸಭೆಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಆತನ ತವರೂರಲ್ಲಿ ನಡೆಸಲಾಗಿದೆ. ಇದರಲ್ಲಿ ಹಲವು ಲಷ್ಕರ್‌ ಉಗ್ರರೂ ಭಾಗಿಯಾಗಿದ್ದಾರೆ. ಇದರಿಂದಾಗಿ ದಾಳಿಯಲ್ಲಿ ತನ್ನ ಪಾತ್ರವಿಲ್ಲ ಎನ್ನುತ್ತಿರುವ ಪಾಕಿಸ್ತಾನದ ಮುಖವಾಡ ಮತ್ತೊಮ್ಮೆ ಕಳಚಿದೆ.

ಪಹಲ್ಗಾಂ ದಾಳಿಯಲ್ಲಿ ಪಾಲ್ಗೊಂಡಿದ್ದ ಜಿಬ್ರಾನ್‌ ಸೇರಿ ಮೂವರು ಉಗ್ರರನ್ನು ಶ್ರೀನಗರದ ಹರ್ವಾನ್‌ನಲ್ಲಿ ನಡೆದ ಆಪರೇಷನ್‌ ಮಹಾದೇವದಲ್ಲಿ ಭಾರತೀಯ ಸೇನೆ ಹತ್ಯೆ ಮಾಡಿತ್ತು. ನಂತರ ಉಗ್ರರ ಶವವನ್ನು ಅಲ್ಲೇ ವಿಲೇವಾರಿ ಮಾಡಲಾಗಿತ್ತು. ವಿಷಯ ತಿಳಿದು ಆತನ ಹುಟ್ಟೂರಾದ ಪಾಕ್ ಆಕ್ರಮಿತ ಕಾಶ್ಮೀರದ ಖಾಯ್‌ ಗಾಲಾದಲ್ಲಿ ಕುಟುಂಬಸ್ಥರು ಇತ್ತೀಚೆಗೆ ಅಣಕು ಅಂತಿಮ ವಿಧಿವಿಧಾನ ಕಾರ್ಯಕ್ರಮ ಆಯೋಜಿಸಿದ್ದರು. ಎಲ್‌ಇಟಿ ಕಮಾಂಡರ್‌ ರಿಜ್ವಾನ್‌ ಹನೀಫ್‌ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸ್ಥಳಕ್ಕೆ ಆಗಮಿಸಿದ್ದ ಎಂದು ವಿಡಿಯೋ ಸಮೇತ ಬಯಲಾಗಿದೆ.

ಲಷ್ಕರ್ ನಾಯಕ ರಿಜ್ವಾನ್‌ ಓಡಿಸಿದ ಗ್ರಾಮಸ್ಥರು

ಉಗ್ರ ಜಿಜ್ರಾನ್ ಅಂತಿಮ ವಿಧಿ-ವಿಧಾನ ಕಾರ್ಯಕ್ರಮದಲ್ಲಿ ಉಗ್ರರು ಮತ್ತು ಗ್ರಾಮಸ್ಥರ ನಡುವೆ ತೀವ್ರ ತಿಕ್ಕಾಟ ನಡೆದ ಪ್ರಸಂಗ ನಡೆದಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಲಷ್ಕರ್‌ ಕಮಾಂಡರ್‌ ರಿಜ್ವಾನ್‌ ಹನೀಫ್‌, ಮತ್ತಿತರ ಉಗ್ರರನ್ನು ಗ್ರಾಮಸ್ಥರು ಹಾಗೂ ಮೃತನ ಕುಟುಂಬಸ್ಥರು ಸೇರಿ ಸ್ಥಳದಿಂದಲೇ ಓಡಿಸಿದ್ದಾರೆ.

ಹಿಂದಿನಿಂದಲೂ ಖಾಯ್‌ ಗಾಲಾ ಗ್ರಾಮ ಮೂಲಭೂತವಾದದ ಆಡೊಂಬಲವಾಗಿತ್ತು. ಇದೀಗ ಅಲ್ಲಿನ ಜನ ಉಗ್ರ ನೇಮಕಾತಿಗೆ ಸಾರ್ವಜನಿಕ ಬಹಿಷ್ಕಾರ ಹಾಕಲು ನಿರ್ಧರಿಸಿದ್ದಾರೆ. ಹೀಗಾಗಿ ಸ್ಥಳಕ್ಕೆ ಬಂದ ರಿಜ್ವಾನ್‌ ಜತೆ ಗ್ರಾಮಸ್ಥರು ಹಾಗೂ ಜಿಬ್ರಾನ್‌ ಕುಟುಂಬಸ್ಥರು ಕೆಲಕಾಲ ಮಾತಿನ ಚಕಮಕಿ ನಡೆಸಿದ್ದಾರೆ. ಆಗ ಇತರ ಲಷ್ಕರ್‌ ಉಗ್ರರು ಗನ್‌ ತೋರಿಸಿ ಬೆದರಿಕೆ ಹಾಕಿದ್ದು, ಇದು ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಕೊನೆಗೆ ಗ್ರಾಮಸ್ಥರ ವಿರೋಧಕ್ಕೆ ಹೆದರಿ ಉಗ್ರರು ಅಲ್ಲಿಂದ ಕಾಲ್ಕಿತ್ತರು ಎಂದು ಗೊತ್ತಾಗಿದೆ.

ಪಾಕ್‌ ಸೇನೆಯಲ್ಲಿದ್ದ ಉಗ್ರ:

ಮೂಲತಃ ತಾಹಿರ್‌ ಅಲಿಯಾಸ್‌ ಜಿಬ್ರಾನ್‌ ಪಾಕ್ ಸೇನೆಯಲ್ಲಿದ್ದ. ಐಎಸ್‌ಐ ಅಣತಿಯಂತೆ ಈತನನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಕೃತ್ಯವೆಸಗಲು ಎಲ್‌ಇಟಿಗೆ ನಿಯೋಜಿಸಲಾಗಿತ್ತು. ಈತ ಕಾಶ್ಮೀರದಲ್ಲಿ ಪ್ರಚೋದಕ ಭಾಷಣ ಮಾಡಿ ಉಗ್ರರ ನೇಮಕ ನಡೆಸುತ್ತಿದ್ದ.

ಪಹಲ್ಗಾಂ ದಾಳಿ ಬಳಿಕ ಕಾಶ್ಮೀರದಲ್ಲಿ ಒಟ್ಟು 21 ಉಗ್ರರ ಹತ್ಯೆ

ನವದೆಹಲಿ: ಏ.22ರ ಪಹಲ್ಗಾಂ ಉಗ್ರದಾಳಿ ಬಳಿಕ ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 21 ಉಗ್ರರನ್ನು ಹೊಡೆದುರುಳಿಸಿವೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.ಭಾರತೀಯ ಸೇನೆ, ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಪ್), ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹಾಗೂ ಜಮ್ಮು ಕಾಶ್ಮೀರ ಪೊಲೀಸರು ಜಂಟಿಯಾಗಿ 6 ವಿವಿಧ ಕಾರ್ಯಾಚರಣೆಗಳನ್ನು ನಡೆಸಿದ್ದಾರೆ. ಈ ವೇಳೆ, ಒಟ್ಟು 21 ಉಗ್ರರು ಸಾವನ್ನಪ್ಪಿದ್ದಾರೆ. ಈ ಪೈಕಿ 12 ಉಗ್ರರು ಪಾಕಿಸ್ತಾನೀಯರು ಹಾಗೂ ಉಳಿದ 9 ಉಗ್ರರು ಸ್ಥಳೀಯರು ಎಂದು ತಿಳಿದುಬಂದಿವೆ. ಈ ಕಾರ್ಯಾಚರಣೆಗಳ ಬಳಿಕ ಸ್ಥಳೀಯ ಉಗ್ರರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ ಎಂದು ಮೂಲಗಳು ಹೇಳಿವೆ.

ಪಾಕ್‌ ಪಾತ್ರಕ್ಕೆ ಸಾಕ್ಷ್ಯವಿಲ್ಲ ಎಂದ ಅಯ್ಯರ್‌ಗೆ ಬಿಜೆಪಿ ಗುದ್ದು

ನವದೆಹಲಿ: ಪಹಲ್ಗಾಂ ದಾಳಿಯಲ್ಲಿ ಪಾಕಿಸ್ತಾನ ಭಾಗಿಯಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಭಾರತ ತನ್ನ ಸರ್ವಪಕ್ಷ ನಿಯೋಗವನ್ನು ಕಳಿಸಿದ್ದ 33 ದೇಶಗಳು ಸಹ ಈ ದಾಳಿಗೆ ಪಾಕಿಸ್ತಾನವನ್ನು ಹೊಣೆಗಾರರನ್ನಾಗಿ ಮಾಡಿಲ್ಲ ಎಂದು ಕಾಂಗ್ರೆಸ್ ನಾಯಕ ಮಣಿಶಂಕರ್‌ ಅಯ್ಯರ್‌ ಹೇಳಿದ್ದಾರೆ. ಇದಕ್ಕೆ ಬಿಜೆಪಿ ಆಕ್ಷೇಪಿಸಿದ್ದು, ‘ಕಾಂಗ್ರೆಸ್‌ ನಾಯಕರು ಪಾಕಿಸ್ತಾನಕ್ಕೆ ಬೆಂಗಾವಲಾಗಿ ನಿಂತಿದ್ದಾರೆ. ಇದು ನಾಚಿಕೆಗೇಡು’ ಎಂದಿದೆ.

Read more Articles on