ಸಾರಾಂಶ
ತಂತ್ರಜ್ಞಾನ ಮತ್ತು ಶಸ್ತ್ರಾಸ್ತ್ರ ಕ್ಷೇತ್ರದಲ್ಲಿ ತನ್ನ ಪ್ರತಿಸ್ಪರ್ಧಿ ಚೀನಾಗೆ ಸಡ್ಡು ಹೊಡೆಯಲು ಅಮೆರಿಕ 6ನೇ ತಲೆಮಾರಿನ ಯುದ್ಧ ವಿಮಾನವನ್ನು ತಯಾರಿಸಲು ಮುಂದಾಗಿದೆ.
ವಾಷಿಂಗ್ಟನ್: ತಂತ್ರಜ್ಞಾನ ಮತ್ತು ಶಸ್ತ್ರಾಸ್ತ್ರ ಕ್ಷೇತ್ರದಲ್ಲಿ ತನ್ನ ಪ್ರತಿಸ್ಪರ್ಧಿ ಚೀನಾಗೆ ಸಡ್ಡು ಹೊಡೆಯಲು ಅಮೆರಿಕ 6ನೇ ತಲೆಮಾರಿನ ಯುದ್ಧ ವಿಮಾನವನ್ನು ತಯಾರಿಸಲು ಮುಂದಾಗಿದೆ. ಎಫ್-47 ಹೆಸರಿನ ಈ ಯುದ್ಧ ವಿಮಾನದ ನಿರ್ಮಾಣ ಕಾರ್ಯವನ್ನು ಬೋಯಿಂಗ್ ಸಂಸ್ಥೆಗೆ ವಹಿಸಲಾಗಿದ್ದು, ಇದಕ್ಕಾಗಿ 20 ಬಿಲಿಯನ್ ಡಾಲರ್ (1.7 ಲಕ್ಷ ಕೋಟಿ ರು.) ನೀಡಲು ಅಮೆರಿಕ ನಿರ್ಧರಿಸಿದೆ.
ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದು, ‘47 ಅದ್ಭುತವಾದ ಸಂಖ್ಯೆಯಾಗಿದೆ. ವೇಗ, ಪೇಲೋಡ್ ಸಾಮರ್ಥ್ಯ ಮತ್ತು ಹಾರಾಟದ ಕೌಶಲ್ಯದಲ್ಲಿ ಇದಕ್ಕೆ ಸರಿಸಾಟಿಯಾದ ಯಾವುದೇ ವಿಮಾನ ಇಡೀ ವಿಶ್ವದಲ್ಲೇ ಇಲ್ಲ. ಇದು ಈವರೆಗೆ ವಾಯುಪಡೆಯ ಬೆನ್ನುಮೂಳೆಯಂತಿದ್ದ 5ನೇ ತಲೆಮಾರಿನ ಎಫ್-22 ಜಾಗವನ್ನು ತುಂಬಲಿದೆ’ ಎಂದು ಹೇಳಿದ್ದಾರೆ.ಟ್ರಂಪ್ ಅವರು ಅಮೆರಿಕದ 47ನೇ ಅಧ್ಯಕ್ಷರಾಗಿದ್ದು, ಹೊಸ ಯುದ್ಧವಿಮಾನಕ್ಕೆ ಎಫ್-47 ಎಂದು ಹೆಸರಿಡುವ ಮೂಲಕ ಪರೋಕ್ಷವಾಗಿ ಅವರ ಹೆಸರಿಡಲಾಗಿರುವುದು ವಿಶೇಷ.