ವಾಷಿಂಗ್ಟನ್: ಇರಾನ್ ಮೇಲೆ ಭರ್ಜರಿಯಾದ ಚುಟುಕು ದಾಳಿಗೆ ಅಮೆರಿಕ ಸಜ್ಜಾಗುತ್ತಿದೆ ಎಂಬ ವರದಿಗಳ ಬೆನ್ನಲ್ಲೇ, ತನ್ನ ಮಿತ್ರ ಇಸ್ರೇಲ್‌ಗೆ ಅಮೆರಿಕ 6500 ಟನ್‌ಗಳಷ್ಟು ಯುದ್ಧ ಸಾಮಗ್ರಿಗಳನ್ನು ರವಾನಿಸಿದೆ ಎಂಬ ವಿಷಯ ಬೆಳಕಿಗೆ ಬಂದಿದೆ. ಇದು ಎರಡೂ ದೇಶಗಳು ಸಂಘಟಿತವಾಗಿ ದಾಳಿ ನಡೆಸುವ ಮುನ್ಸೂಚನೆ ಇರಬಹುದು ಎಂದು ವಿಶ್ಲೇಷಿಸಲಾಗಿದೆ.
ಈ ವಾರ ಕೇವಲ 24 ಗಂಟೆಗಳ ಅವಧಿಯಲ್ಲಿ 2 ಹಡಗುಗಳು, ಹಲವು ವಿಮಾನಗಳ ಮೂಲಕ ಮಿಲಿಟರಿ ಟ್ರಕ್‌ಗಳು, ಜೆಎಲ್‌ಟಿವಿಗಳು, ಕ್ಷಿಪಣಿಗಳು, ಇತರೆ ಉಪಕರಣಗಳನ್ನು ಅಮೆರಿಕ ಇಸ್ರೇಲ್‌ಗೆ ಪೂರೈಸಿದೆ ಎನ್ನಲಾಗಿದೆ. ಜೊತೆಗೆ, ಇರಾನ್ ಜತೆಗಿನ ಯುದ್ಧ ಆರಂಭವಾದಂದಿನಿಂದ ಈವರೆಗೆ ಒಟ್ಟಾರೆ 10 ಹಡಗುಗಳು, 403 ವಿಮಾನಗಳ ಮೂಲಕ 1,15,600 ಟನ್ ಶಸ್ತಾಸ್ತ್ರಗಳನ್ನು ಅಮೆರಿಕವು ಇಸ್ರೇಲ್‌ಗೆ ಪೂರೈಸಿದೆ ಎಂದು ಹೇಳಲಾಗುತ್ತಿದೆ.
ಅಮೆರಿಕ ಮುಂದೆ 2 ಆಯ್ಕೆ:
ತಜ್ಞರ ಪ್ರಕಾರ, ಇರಾನ್ ವಿಚಾರಲ್ಲಿ ಅಮೆರಿಕವು ಎರಡು ಆಯ್ಕೆಗಳ ಕುರಿತು ಪರಿಶೀಲನೆ ನಡೆಸುತ್ತಿದೆ. ಮೊದಲನೆಯದು ಇರಾನ್ ಮೇಲಿನ ನಿರ್ಬಂಧವನ್ನು ಇನ್ನಷ್ಟು ಕಠಿಣಗೊಳಿಸಿ ಆರ್ಥಿಕವಾಗಿ ದುರ್ಬಲಗೊಳಿಸುವುದು. ಎರಡನೆಯದು ಇರಾನ್ ಮೇಲೆ ಮತ್ತೆ ಭಾರೀ ದಾಳಿ ನಡೆಸುವುದು.
ಈಗಾಗಲೇ ಅಮೆರಿಕದ ಸೆಂಟ್ರಲ್ ಕಮಾಂಡ್ ಇರಾನ್ ವಿರುದ್ಧ ಹೊಸ ಮಿಲಿಟರಿ ಕಾರ್ಯಾಚರಣೆ ಕುರಿತು ಸರ್ಕಾರಕ್ಕೆ ವಿವರಣೆ ನೀಡಿದೆ ಎನ್ನಲಾಗಿದೆ. ಕಡಿಮೆ ಅವಧಿಯ ಆದರೆ ಪ್ರಬಲವಾದ ದಾಳಿ ನಡೆಸುವ ಕುರಿತು ಈ ವಿವರಣೆ ನೀಡಲಾಗಿದ್ದು, ಮೂಲಸೌಲಭ್ಯಗಳನ್ನೇ ಗುರಿಯಾಗಿರಿಸಿ ದಾಳಿ ನಡೆಸಲುದ್ದೇಶಿಸಲಾಗಿದೆ. ಈ ಮೂಲಕ ಇರಾನ್ ಆಡಳಿತವನ್ನು ಸಂಧಾನದ ಮೇಜಿಗೆ ಬರುವಂತೆ ಮಾಡುವುದು ಅಮೆರಿಕ-ಇಸ್ರೇಲ್‌ನ ಉದ್ದೇಶವಾಗಿದೆ.
ಡೀಲ್‌ಗೆ ಇರಾನ್ ತುದಿಗಾಲಲ್ಲಿ ನಿಂತಿದೆ: ಟ್ರಂಪ್
ಇರಾನ್ ಆಡಳಿತವು ನಮ್ಮ ಜತೆಗೆ ಒಪ್ಪಂದ ಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಜತೆಗೆ, ಸದ್ಯಕ್ಕೆ ಇರಾನ್ ಮೇಲೆ ದಾಳಿ ನಡೆಸುವ ಅಗತ್ಯ ಅಮೆರಿಕಕ್ಕಿಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ. ಅವರ ನೌಕಾಪಡೆ, ವಾಯುಪಡೆ ನಾಶವಾಗಿದೆ. ಅವರ ಡ್ರೋನ್ ಕಾರ್ಖಾನೆಗಳು ಶೇ.82ರಷ್ಟು ನಿರ್ನಾಮವಾಗಿವೆ. ಕ್ಷಿಪಣಿ ಉತ್ಪಾದನಾ ಸಾಮರ್ಥ್ಯವೂ ಕುಸಿದಿದೆ. ಕ್ಷಿಪಣಿ ಕಾರ್ಖಾನೆಗಳು ಶೇ.90ರಷ್ಟು ನಾಶಗೊಂಡಿವೆ. ಅವರಿಗೆ ತೈಲದಿಂದಲೂ ಆದಾಯ ಗಿಟ್ಟುತ್ತಿಲ್ಲ. ಹೀಗಾಗಿ ಒಪ್ಪಂದ ಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಹೇಳಿದ್ದಾರೆ ಟ್ರಂಪ್.
