ಸಾರಾಂಶ
‘ಇದಾದ ಬಳಿಕ ಬೆಂಗಳೂರಿನಲ್ಲಿ ವಿಮಾನ ನಿಲ್ದಾಣ ಸಿಬ್ಬಂದಿಗಳು ನನ್ನ ಪ್ರಶಸ್ತಿಯ ಟ್ರೋಫಿಯನ್ನು ತಪಾಸಣೆಗೆ ಒಳಪಡಿಸಿದರು’ ಎಂಬ ಸ್ವಾರಸ್ಯಕರ ಸಂಗತಿಯೊಂದನ್ನು ವೀರ್ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.
ಪ್ರಶಸ್ತಿಗೆ ಚೂಪಾದ ರೆಕ್ಕೆ ಇದ್ದ ಕಾರಣಕ್ಕೆ ಸಂದೇಹ
ಬೆಂಗಳೂರು: ನಟ ಹಾಗೂ ಹಾಸ್ಯ ಕಲಾವಿದ ವೀರ್ ದಾಸ್ ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ‘ಎಮ್ಮಿ’ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ‘ಇದಾದ ಬಳಿಕ ಬೆಂಗಳೂರಿನಲ್ಲಿ ವಿಮಾನ ನಿಲ್ದಾಣ ಸಿಬ್ಬಂದಿಗಳು ನನ್ನ ಪ್ರಶಸ್ತಿಯ ಟ್ರೋಫಿಯನ್ನು ತಪಾಸಣೆಗೆ ಒಳಪಡಿಸಿದರು’ ಎಂಬ ಸ್ವಾರಸ್ಯಕರ ಸಂಗತಿಯೊಂದನ್ನು ವೀರ್ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.ಭದ್ರತಾ ಸಿಬ್ಬಂದಿಯೊಬ್ಬರು ‘ಬ್ಯಾಗ್‌ನಲ್ಲಿ ಚೂಪಾದ ಮೂರ್ತಿ ಇದೆಯೇ’ ಎಂದು ಪ್ರಶ್ನಿಸಿದಾಗ ‘ಇಲ್ಲ ಸರ್ ಅದು ಪ್ರಶಸ್ತಿ. ಅದಕ್ಕೆ ಚೂಪಾದ ರೆಕ್ಕೆ ಇವೆ’ ಎಂದು ವೀರ್ ಹೇಳಿದ್ದಾರೆ. ಬಳಿಕ ಅದನ್ನು ತೆಗೆದು ಅಧಿಕಾರಿಗೆ ತೋರಿಸಿದಾಗ ಅವರು ‘ಚೆನ್ನಾಗಿದೆ. ನೀವೇನು ಮಾಡುತ್ತೀರಿ’ ಎಂದು ಕೇಳಿದ್ದಾರೆ. ಅದಕ್ಕೆ ವೀರ್, ‘ಜೋಕ್ ಮಾಡುತ್ತೇನೆ’ ಎಂದಿದ್ದಾರೆ. ಹೀಗೆ ಇಬ್ಬರ ಸಂಭಾಷಣೆ ನಗುವಿನಲ್ಲಿ ಅಂತ್ಯವಾಗಿದೆ. ಎಮ್ಮಿ ಪ್ರಶಸ್ತಿ ಟ್ರೋಫಿಯು ಮನುಷ್ಯಾಕಾರದಲ್ಲಿದ್ದು, ಇದರ ಬಾಹುಗಳಿಗೆ ಎರಡು ಚೂಪಾದ ರೆಕ್ಕೆಗಳಿವೆ.