ವಿಕಿಲೀಕ್ಸ್‌ನ ಅಸಾಂಜ್‌ ಬಂಧಮುಕ್ತ

| Published : Jun 26 2024, 12:31 AM IST / Updated: Jun 26 2024, 08:17 AM IST

ಸಾರಾಂಶ

ವಿಕಿಲೀಕ್ಸ್‌ನ ಅಸಾಂಜ್‌ ಬಂಧಮುಕ್ತರಾಗಿದ್ದು, ಅಮೆರಿಕ ಜತೆ ಡೀಲ್‌ ಮಾಡಿಕೊಂಡ ಆರೋಪದಲ್ಲಿ ತಮ್ಮ ಶಿಕ್ಷೆಯನ್ನು ಪೂರೈಸಿ ಬ್ರಿಟನ್‌ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ವಿಚಾರಣೆಯ ವೇಳೆ ತಟಸ್ಥ ಸ್ಥಳದಲ್ಲಿ ಅಮೆರಿಕ ಕೋರ್ಟ್‌ಗೆ ಅವರನ್ನು ಹಾಜರುಪಡಿಸಲಾಗಿತ್ತು.

 ಲಂಡನ್‌/ವಾಷಿಂಗ್ಟನ್‌ :  ಅಮೆರಿಕದ ರಹಸ್ಯ ಮಿಲಿಟರಿ ದಾಖಲೆಗಳನ್ನು ಬಹಿರಂಗಗೊಳಿಸುವ ಮೂಲಕ ಜಗತ್ತಿನಾದ್ಯಂತ ದಿಢೀರ್‌ ಪ್ರಸಿದ್ಧಿಗೆ ಬಂದಿದ್ದ ಹಾಗೂ ಅಮೆರಿಕದ ತೀವ್ರ ಕೆಂಗಣ್ಣಿಗೆ ಗುರಿಯಾಗಿದ್ದ ವಿಕಿಲೀಕ್ಸ್‌ನ ಸಂಸ್ಥಾಪಕ ಜೂಲಿಯನ್‌ ಅಸಾಂಜ್‌ (52) ಅಮೆರಿಕದ ಜತೆ ‘ಒಪ್ಪಂದ’ ಮಾಡಿಕೊಂಡಿದ್ದು, ಐದು ವರ್ಷಗಳ ಬಳಿಕ ಬ್ರಿಟನ್‌ನ ಬಿಗಿ ಭದ್ರತೆಯ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ.

ಆಸ್ಟ್ರೇಲಿಯಾಕ್ಕೆ ಸಮೀಪದಲ್ಲಿರುವ ಮಾರಿಯಾನಾ ದ್ವೀಪಕ್ಕೆ ಅವರು ಪ್ರಯಾಣ ಬೆಳೆಸಿದ್ದು, ಅಲ್ಲಿನ ಅಮೆರಿಕ ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ. ಈಗಾಗಲೇ ಅಸಾಂಜ್‌ ಹಾಗೂ ಅಮೆರಿಕ ನಡುವೆ ಆಗಿರುವ ಒಪ್ಪಂದದ ಪ್ರಕಾರ, ರಹಸ್ಯ ದಾಖಲೆಗಳನ್ನು ಸೋರಿಕೆ ಮಾಡುವ ಮೂಲಕ ಕ್ರಿಮಿನಲ್‌ ಅಪರಾಧ ಮಾಡಿರುವುದಾಗಿ ಕೋರ್ಟ್‌ ಮುಂದೆ ಅಸಾಂಜ್‌ ತಪ್ಪೊಪ್ಪಿಕೊಳ್ಳಲಿದ್ದಾರೆ. ಬ್ರಿಟನ್‌ನಲ್ಲಿ ಅವರು ಈಗಾಗಲೇ ಅನುಭವಿಸಿರುವಷ್ಟೇ ಶಿಕ್ಷೆಯನ್ನು ಕೋರ್ಟ್‌ ವಿಧಿಸಲಿದೆ. ಹೀಗಾಗಿ ಕೂಡಲೇ ಅವರು ಬಿಡುಗಡೆಯಾಗಲಿದ್ದು, ಬಳಿಕ ತಮ್ಮ ತಾಯ್ನಾಡು ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ. ಈಗಾಗಲೇ ಅವರ ಪತ್ನಿ ಹಾಗೂ ಮಕ್ಕಳು ಆಸ್ಟ್ರೇಲಿಯಾವನ್ನು ತಲುಪಿದ್ದಾರೆ.ವಿವಾದಗಳ ಸರದಾರ ಅಸಾಂಜ್‌:

2010ರಲ್ಲಿ ಅಮೆರಿಕ ಮಿಲಿಟರಿಯ ರಹಸ್ಯ ದಾಖಲೆಗಳನ್ನು ವಿಕಿಲೀಕ್ಸ್‌ ಬಿಡುಗಡೆ ಮಾಡಿತ್ತು. ಇದರಿಂದ ಯಾರ ಕೈಗೂ ಸಿಗದ ದಾಖಲೆಗಳು ವಿಶ್ವದ ಮುಂದೆ ಅನಾವರಣಗೊಂಡಿದ್ದವು. ಅಸಾಂಜ್‌ ನಡೆ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿತ್ತು. ಅವರ ವಿರುದ್ಧ ಕ್ರಮ ಆಗುತ್ತದೆ ಎನ್ನುವಷ್ಟರಲ್ಲಿ ಸ್ವಿಜರ್ಲೆಂಡ್‌ನಲ್ಲಿ ಅಸಾಂಜ್‌ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.

ಸ್ವಿಸ್‌ ಸರ್ಕಾರ ಅಸಾಂಜ್‌ ಅವರನ್ನು ಗಡೀಪಾರು ಮಾಡಿಸಿಕೊಳ್ಳಲಿದೆ ಎಂಬುದು ಗೊತ್ತಾಗುತ್ತಿದ್ದಂತೆ 2012ರಲ್ಲಿ ಈಕ್ವೆಡಾರ್‌ ದೂತಾವಾಸದಲ್ಲಿ ಅಸಾಂಜ್‌ ಆಶ್ರಯ ಪಡೆದುಕೊಂಡಿದ್ದರು. 2019ರಲ್ಲಿ ಈಕ್ವೆಡಾರ್‌ ಅವರಿಗೆ ರಾಜತಾಂತ್ರಿಕ ಆಶ್ರಯವನ್ನು ಹಿಂಪಡೆದುಕೊಂಡಿತ್ತು. ಗಡೀಪಾರು ವಿಚಾರಣೆಗೆ ಹಾಜರಾಗದ ಕಾರಣ ಅಸಾಂಜ್‌ ಅವರನ್ನು ಬ್ರಿಟನ್‌ ಪೊಲೀಸರು ಬಂಧಿಸಿದ್ದರು.

ಈ ನಡುವೆ ಅಮೆರಿಕ ಸರ್ಕಾರ ಗಡೀಪಾರು ಕೋರಿಕೆ ಅರ್ಜಿಯನ್ನು ಬ್ರಿಟನ್‌ಗೆ ಸಲ್ಲಿಸಿದ್ದರೆ, ಪ್ರಕರಣ ದಾಖಲಾಗಿ ಹಲವು ವರ್ಷಗಳಾಗಿದ್ದ ಕಾರಣ ಸ್ವಿಜರ್ಲೆಂಡ್‌ ಸರ್ಕಾರ ಅಸಾಂಜ್‌ ವಿರುದ್ಧದ ಪ್ರಕರಣ ರದ್ದುಗೊಳಿಸಿತ್ತು. ಆಸ್ಟ್ರೇಲಿಯಾ ಸರ್ಕಾರದ ಕೋರಿಕೆ ಮೇರೆಗೆ ಅಸಾಂಜ್‌ ಮೇಲೆ ಕಠಿಣ ಕ್ರಮ ಕೈಗೊಳ್ಳದೆ ಪರಸ್ಪರ ತಿಳುವಳಿಕೆ ಮಾಡಿಕೊಂಡು ಬಿಡುಗಡೆ ಮಾಡಲು ಅಮೆರಿಕ ಮುಂದಾಗಿತ್ತು. ಅದು ಈಗ ಕಾರ್ಯರೂಪಕ್ಕೆ ಬಂದಿದೆ.

ಅದರ ಫಲವಾಗಿ ಅಮೆರಿಕದ 50 ರಾಜ್ಯಗಳ ಪೈಕಿ ಎಲ್ಲೂ ವಿಚಾರಣೆ ಎದುರಿಸದೆ, ಆಸ್ಟ್ರೇಲಿಯಾಕ್ಕೆ ಸಮೀಪದಲ್ಲಿರುವ ಅಮೆರಿಕದ ದ್ವೀಪವೊಂದರಲ್ಲಿ ವಿಚಾರಣೆ ಎದುರಿಸಲು ಅಸಾಂಜ್‌ ಒಪ್ಪಿಕೊಂಡಿದ್ದಾರೆ.