ಡೆನ್ಮಾರ್ಕ್‌ನ ಸ್ವಾಯತ್ತ ಪ್ರದೇಶ ಗ್ರೀನ್‌ಲ್ಯಾಂಡ್‌ ಮೇಲೆ ಕಣ್ಣಿಟ್ಟಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅದನ್ನು ಶತಾಯ ಗತಾಯ ವಶಪಡಿಸಿಕೊಳ್ಳುವ ಶಪಥ ಮಾಡಿದ್ದಾರೆ. ‘ಗ್ರೀನ್‌ಲ್ಯಾಂಡ್‌ ಜನರ ಒಪ್ಪಲಿ, ಬಿಡಲಿ ನಾವು ಅದನ್ನು ಬಲವಂತವಾಗಿಯಾದರೂ ವಶಪಡಿಸಿಕೊಳ್ಳುತ್ತೇವೆ’ ಎಂದು  ಘೋಷಿಸಿದ್ದಾರೆ.

ವಾಷಿಂಗ್ಟನ್‌: ಡೆನ್ಮಾರ್ಕ್‌ನ ಸ್ವಾಯತ್ತ ಪ್ರದೇಶ ಗ್ರೀನ್‌ಲ್ಯಾಂಡ್‌ ಮೇಲೆ ಕಣ್ಣಿಟ್ಟಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅದನ್ನು ಶತಾಯ ಗತಾಯ ವಶಪಡಿಸಿಕೊಳ್ಳುವ ಶಪಥ ಮಾಡಿದ್ದಾರೆ. ‘ಗ್ರೀನ್‌ಲ್ಯಾಂಡ್‌ ಜನರ ಒಪ್ಪಲಿ, ಬಿಡಲಿ ನಾವು ಅದನ್ನು ಬಲವಂತವಾಗಿಯಾದರೂ ವಶಪಡಿಸಿಕೊಳ್ಳುತ್ತೇವೆ’ ಎಂದು ಟ್ರಂಪ್‌ ಘೋಷಿಸಿದ್ದಾರೆ. ಈ ಮೂಲಕ ಹೇಗಾದರೂ ವಶಕ್ಕೆ ತಾವು ರೆಡಿ ಎಂಬ ಸಂದೇಶ ರವಾನಿಸಿದ್ದಾರೆ.

ವೆನಿಜುವೆಲಾದ ತೈಲ ಮೀಸಲು ಚರ್ಚಿಸಲು ಶ್ವೇತಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಟ್ರಂಪ್‌, ‘ನಾವು ಸರಳವಾಗಿಯೇ ಈ ಕುರಿತು ಒಪ್ಪಂದಕ್ಕೆ ಸಜ್ಜಾಗಿದ್ದೇವೆ. ಒಂದು ವೇಳೆ ಅವರು ಒಪ್ಪಂದೇ ಹೋದಲ್ಲಿ ಅದನ್ನು ಕಠಿಣ ಮಾರ್ಗಗಳ ಮೂಲಕ ಮಾಡುತ್ತೇವೆ’ ಎಂದರು.

‘ನಮಗೆ ಗ್ರೀನ್‌ಲ್ಯಾಂಡ್‌ ಬೇಕು. ಆರ್ಕಟಿಕ್‌ ವಲಯದಲ್ಲಿ ರಷ್ಯಾ, ಚೀನಾ ಮಿಲಿಟರಿ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಅಮೆರಿಕದ ಹಿತಾಸಕ್ತಿ ದೃಷ್ಟಿಯಿಂದ ಅದಕ್ಕೆ ಕಡಿವಾಣ ಹಾಕಬೇಕಿದೆ. ರಷ್ಯಾ, ಚೀನಾ ನಮ್ಮ ನೆರೆ ರಾಷ್ಟ್ರಗಳು ಆಗಕೂಡದು. ರಷ್ಯಾ ಮತ್ತು ಚೀನಾ ಗ್ರೀನ್‌ಲ್ಯಾಂಡ್‌ ವಶಪಡಿಸಿಕೊಳ್ಳಲು ನಾವು ಬಿಡುವುದಿಲ್ಲ. ನಾವು ಮಾಡದಿದ್ದರೆ ಅವರು ಅದನ್ನೇ ಮಾಡುತ್ತಾರೆ. ಹಾಗಾಗಿ ಒಳ್ಳೆಯದು ಅಥವಾ ಕಷ್ಟಕರ ರೀತಿಯಲ್ಲಿ ಅಮೆರಿಕವು ಗ್ರೀನ್‌ಲ್ಯಾಂಡ್‌ಗಾಗಿ ಏನು ಬೇಕಿದ್ದರೂ ಮಾಡುತ್ತದೆ’ ಎಂದರು.

ಮಾತುಕತೆಗೆ ಸಿದ್ಧ:

ಗ್ರೀನ್‌ಲ್ಯಾಂಡ್‌ ಹಿಡಿತಕ್ಕೆ ಹವಣಿಸುತ್ತಿರುವ ಟ್ರಂಪ್‌ ವಿರುದ್ಧ ಗ್ರೀನ್‌ಲ್ಯಾಂಡ್‌ನಲ್ಲಿ ಪಕ್ಷಬೇಧ ಮರೆತು ಎಲ್ಲರೂ ತಿರುಗಿ ಬಿದ್ದಿದ್ದಾರೆ. ಟ್ರಂಪ್‌ ಬೆದರಿಕೆ ಬೆನ್ನಲ್ಲೇ ‘ಇದನ್ನೆಲ್ಲ ಇಲ್ಲಿಗೆ ನಿಲ್ಲಿಸಿ’ ಎಂದು ಗ್ರೀನ್‌ಲ್ಯಾಂಡ್‌ ಪ್ರಧಾನಿ ಜೆನ್ಸ್ ಫ್ರೆಡೆರಿಕ್ ನೀಲ್ಸನ್ ಎಚ್ಚರಿಸಿದ್ದಾರೆ. ಜತೆಗೆ ‘ನಾವು ಮಾತುಕತೆಗೆ ಸಿದ್ಧರಿದ್ದೇವೆ. ಚರ್ಚೆ ಮಾಡಬಹುದು. ಆದರೆ ಅದೆಲ್ಲವೂ ಸರಿಯಾದ ಮಾರ್ಗಗಳ ಮೂಲಕ ಅಂತಾರಾಷ್ಟ್ರೀಯ ಕಾನೂನಿನ ಮೂಲಕ ನಡೆಯಬೇಕು’ ಎಂದಿದ್ದಾರೆ.

ಅಲ್ಲದೇ ಹಲವು ನಾಯಕರು ‘ ನಮ್ಮ ದೇಶ ಮಾರಾಟಕ್ಕಿಲ್ಲ. ನಮ್ಮ ಭವಿಷ್ಯವನ್ನು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಂದ ನಿರ್ಧರಿಸಲಾಗುವುದಿಲ್ಲ’ ಎಂದು ಹೇಳಿದ್ದಾರೆ.

ಗ್ರೀನ್‌ಲ್ಯಾಂಡ್‌ನ 5 ರಾಜಕೀಯ ಪಕ್ಷಗಳು, ಟ್ರಂಪ್‌ ಹೇಳಿಕೆಯನ್ನು ಬಲವಾಗಿ ವಿರೋಧಿಸಿವೆ.

ಟ್ರಂಪ್‌ ಬೆದರಿಕೆ ವಿರುದ್ಧ ಡೆನ್ಮಾರ್ಕ್‌ ಸೇರಿದಂತೆ ಐರೋಪ್ಯ ದೇಶಗಳು ಧ್ವನಿಯೆತ್ತಿವೆ. ‘ಗ್ರೀನ್‌ಲ್ಯಾಂಡ್‌ ಅತಿಕ್ರಮವು ಎಲ್ಲವುದಕ್ಕೂ ಅಂತ್ಯ ಹಾಡಲಿದೆ. ಗ್ರೀನ್‌ಲ್ಯಾಂಡ್‌ನಲ್ಲಿ ಅಮೆರಿಕ ಹಿಡಿತ ಸಾಧಿಸಬೇಕು ಎನ್ನುವುದು ಅಸಂಬದ್ಧ’ ಎಂದು ಡೆನ್ಮಾರ್ಕ್‌ ಪ್ರಧಾನಿ ಮೇತು ಫ್ರೆಡ್ರಿಕ್ಸನ್‌ ಹೇಳಿದ್ದಾರೆ. 

ಟ್ರಂಪ್‌ ಹೇಳೋದೇನು

- ಆರ್ಕಟಿಕ್‌ ವಲಯದಲ್ಲಿ ರಷ್ಯಾ, ಚೀನಾ ಮಿಲಿಟರಿ ಚಟುವಟಿಕೆಗಳು ಹೆಚ್ಚಳ

- ಇದರ ನಿಯಂತ್ರಣಕ್ಕೆ ನಮಗೆ ಗ್ರೀನ್‌ಲ್ಯಾಂಡ್‌ ಮೇಲೆ ಹಿಡಿತ ಬಲು ಅಗತ್ಯ

- ಒಂದು ವೇಳೆ ನಾವು ಮಾಡದಿದ್ರೆ, ಆ ದೇಶಗಳಿಂದಲೇ ಗ್ರೀನ್‌ಲ್ಯಾಂಡ್‌ ವಶ

- ಆದ್ದರಿಂದ ಡೆನ್ಮಾರ್ಕ್‌ ಸ್ವಾಯತ್ತ ಪ್ರದೇಶ ವಶಕ್ಕೆ ನಮ್ಮ ಕಠಿಣ ನಡೆ: ಟ್ರಂಪ್‌