ಓಣಂ ಪ್ರಯುಕ್ತ ಮಕ್ಕಳು ಹೂವಿನಿಂದ ಚಿತ್ರಿಸಿದ್ದ ರಂಗೋಲಿ ಕಾಲಿನಿಂದ ಅಳಿಸಿ ವಿಕೃತಿ: ಮಹಿಳೆ ವಿರುದ್ಧ ದೂರು

| Published : Sep 23 2024, 01:24 AM IST / Updated: Sep 23 2024, 04:32 AM IST

ಓಣಂ ಪ್ರಯುಕ್ತ ಮಕ್ಕಳು ಹೂವಿನಿಂದ ಚಿತ್ರಿಸಿದ್ದ ರಂಗೋಲಿ ಕಾಲಿನಿಂದ ಅಳಿಸಿ ವಿಕೃತಿ: ಮಹಿಳೆ ವಿರುದ್ಧ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮಕ್ಕಳು ಹಾಕಿದ್ದ ಓಣಂ ರಂಗೋಲಿಯನ್ನು ಮಹಿಳೆಯೊಬ್ಬರು ಕಾಲಿನಿಂದ ಅಳಿಸಿ ಹಾಕಿರುವ ಘಟನೆ ನಡೆದಿದೆ. ಈ ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದರಖಾಸಾಗಿದೆ.

 ಬೆಂಗಳೂರು : ಓಣಂ ಪ್ರಯುಕ್ತ ಮಕ್ಕಳು ಹೂವಿನಿಂದ ಚಿತ್ರಿಸಿದ್ದ ರಂಗೋಲಿಯನ್ನು (ಪೂಕಳಂ ಅಥವಾ ಅಥಪೂಕಳಂ) ಮಹಿಳೆಯೊಬ್ಬರು ಕಾಲಿನಿಂದ ಅಳಿಸಿ ವಿಕೃತಿ ಮೆರೆದ ವಿಡಿಯೋ ‘ಎಕ್ಸ್’ ಸೇರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಸಂಬಂಧ ಅಪಾರ್ಟ್‌ಮೆಂಟ್‌ ನಿವಾಸಿಗಳು ಸಂಪಿಗೆಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಥಣಿಸಂದ್ರದ ಮೊನಾರ್ಕ್ ಸೆರೆನಿಟಿ ಅಪಾರ್ಟ್‌ಮೆಂಟ್‌ನಲ್ಲಿ ಘಟನೆ ನಡೆದಿದ್ದು, ಅಪಾರ್ಟ್‌ಮೆಂಟ್‌ ನಿವಾಸಿ ಸಿಮಿ ನಾಯರ್ ಎಂಬಾಕೆ ಈ ದರ್ಪ ತೋರಿದ್ದಾರೆ. ತನ್ನ ಅಪ್ಪಣೆಯಿಲ್ಲದೆ ಅಪಾರ್ಟ್‌ಮೆಂಟ್‌ನಲ್ಲಿ ಓಣಂ ರಂಗೋಲಿಯನ್ನು ಹಾಕಿದ್ದ ಕಾರಣಕ್ಕೆ ಮಹಿಳೆ ಹುಚ್ಚಾಟ ಮೆರೆದಿದ್ದಾಳೆ ಎಂದು ಪೋಸ್ಟ್ ಮಾಡಲಾಗಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಜನತೆ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ.

ಶನಿವಾರ ಬೆಳಗ್ಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ತನ್ನ ಒಪ್ಪಿಗೆ ಇಲ್ಲದೆ ಅಪಾರ್ಟ್‌ಮೆಂಟ್‌ನಲ್ಲಿ ಏನನ್ನೂ ಮಾಡುವ ಹಾಗೆ ಇಲ್ಲ ಎಂದು ಕ್ಯಾತೆ ತೆಗೆದ ಮಹಿಳೆ, ಓಣಂ ಹಬ್ಬದ ಸಂಭ್ರಮದಲ್ಲಿದ್ದ ಅಪಾರ್ಟ್‌ಮೆಂಟ್‌ ನಿವಾಸಿಗಳ ಜೊತೆ ಜಗಳ ಮಾಡಿದ್ದಾರೆ. ನಿವಾಸಿಗಳು ಅಪಾರ್ಟ್‌ಮೆಂಟ್‌ನ ಕಮ್ಯುನಿಟಿ ಹಾಲ್‌ನಲ್ಲಿ ಬರೆದಿದ್ದ ರಂಗೋಲಿ ಮೇಲೆ ಕಾಲಿಡದಂತೆ ಕೇಳಿಕೊಂಡರೂ ದರ್ಪ ತೋರಿ ಅಳಿಸಿಹಾಕಿದ್ದಾರೆ.

ಓಣಂ ಕೇವಲ ಒಂದು ಧರ್ಮಕ್ಕೆ ಸೀಮಿತವಾದ ಹಬ್ಬವಲ್ಲ, ಕೇರಳದ ಎಲ್ಲರೂ ಜಾತಿ, ಧರ್ಮವನ್ನು ಮೀರಿ ಓಣಂ ಆಚರಿಸುತ್ತೇವೆ. ಹೀಗಿರುವಾಗ ಮಹಿಳೆ ವರ್ತನೆ ಮನಸ್ಸಿಗೆ ನೋವುಂಟು ಮಾಡಿದೆ ಎಂದು ಹಲವರು ‘ಎಕ್ಸ್‌’ನಲ್ಲಿ ಬೇಸರ ತೋಡಿಕೊಂಡಿದ್ದಾರೆ. ಪ್ರಕರಣ ಸಂಬಂಧ ನಿವಾಸಿಗಳು ದೂರು ನೀಡಿದ್ದಾರೆ. ನಾವು ಪರಿಶೀಲನೆ ನಡೆಸುತ್ತಿದ್ದು, ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರು ತಿಳಿಸಿದರು.