ಸಾರಾಂಶ
ಪ್ರಕರಣವೊಂದರಲ್ಲಿ ವ್ಯಕ್ತಿಯನ್ನು ಬಂಧಿಸದಿರಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇನ್‌ಸ್ಪೆಕ್ಟರ್, ಮಹಿಳಾ ಎಸ್‌ಐ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಬಂಧನ ಮಾಡದಿರಲು ₹1 ಲಕ್ಷ ಲಂಚ ಪಡೆಯುತ್ತಿದ್ದ ಪೊಲೀಸ್ ಇನ್‌ಸ್ಪೆಪೆಕ್ಟರ್ ಮತ್ತು ಮಹಿಳಾ ಸಬ್ ಇನ್‌ಸ್ಪೆಕ್ಟರ್ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ.ಕೆ.ಆರ್.ಪುರ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ವಜ್ರಮುನಿ, ಮಹಿಳಾ ಸಬ್ ಇನ್‌ಸ್ಪೆಕ್ಟರ್ ರಮ್ಯಾ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ವಕೀಲ ವೆಂಕಟಾಚಲಪತಿ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಪ್ರಕರಣವೊಂದರಲ್ಲಿ ದೂರುದಾರರ ಕಕ್ಷಿದಾರ ನಿರೀಕ್ಷಣಾ ಜಾಮೀನಿಗೆ ಪ್ರಯತ್ನಿಸುತ್ತಿದ್ದು, ಅದು ಸಿಗುವವರೆಗೆ ಬಂಧಿಸದಂತೆ ಮನವಿ ಮಾಡಲಾಗಿತ್ತು. ಬಂಧನ ಮಾಡದಿರಲು ₹3 ಲಕ್ಷ ಲಂಚಕ್ಕೆ ಬೇಡಿಕೆ ಇಡಲಾಗಿತ್ತು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.ಈ ಮೊದಲು ₹50 ಸಾವಿರ ಲಂಚ ಮುಂಗಡವಾಗಿ ಪಡೆದುಕೊಳ್ಳಲಾಗಿತ್ತು. ಗುರುವಾರ ಪೊಲೀಸ್ ಪೊಲೀಸ್ ಇನ್‌ಸ್ಪೆಕ್ಟರ್ ಮತ್ತು ಮಹಿಳಾ ಸಬ್ ಇನ್‌ಸ್ಪೆಕ್ಟರ್ ತಲಾ ₹50 ಸಾವಿರದಂತೆ ₹1 ಲಕ್ಷ ಲಂಚ ಪಡೆಯುತ್ತಿದ್ದರು. ಈ ವೇಳೆ ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.