ಬ್ಯಾಗ್ ಕದ್ದ ಚಾಲಕನ ಪತ್ತೆಗೆ 10 ಸಾವಿರ ಆಟೋ ಶೋಧ!

| Published : Feb 19 2025, 01:15 AM IST

ಸಾರಾಂಶ

ಇತ್ತೀಚಿಗೆ ಚಿನ್ನಾಭ‍ರಣವಿದ್ದ ಮಹಿಳಾ ಪ್ರಯಾಣಿಕರ ಬ್ಯಾಗ್ ಕಳವು ಮಾಡಿ ಪರಾರಿಯಾಗಿದ್ದ ಆಟೋ ಚಾಲಕನೊಬ್ಬನನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

*ಚಾಲಕ ಸೈಯದ್‌ನ ಆಟೋದಲ್ಲಿ ಪ್ರಯಾಣ ಬೆಳೆಸಿದ್ದ ಮಹಿಳೆ

*ರೈಲ್ವೆ ನಿಲ್ದಾಣದಲ್ಲಿ ಬ್ಯಾಗ್‌ ತೆಗೆದುಕೊಳ್ಳುವ ಮುನ್ನ ಹೊರಟ

*ಆಟೋ ಚಾಲಕ ವಿರುದ್ಧ ರಾಮಮೂರ್ತಿನಗರ ಠಾಣೆಗೆ ದೂರು

*ಸಿಸಿ ಕ್ಯಾಮೆರಾದಲ್ಲಿ ಅಸ್ಪಷ್ಟವಾಗಿದ್ದ ಆಟೋ ನೋಂದಣಿ ಸಂಖ್ಯೆ*ಆಟೋ ಚಾಲಕನಿಗಾಗಿ ಪೊಲೀಸರಿಂದ ಭಾರಿ ಶೋಧ, ಬಂಧನಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚಿಗೆ ಚಿನ್ನಾಭ‍ರಣವಿದ್ದ ಮಹಿಳಾ ಪ್ರಯಾಣಿಕರ ಬ್ಯಾಗ್ ಕಳವು ಮಾಡಿ ಪರಾರಿಯಾಗಿದ್ದ ಆಟೋ ಚಾಲಕನೊಬ್ಬನನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆ.ಆರ್‌.ಪುರದ ನಿವಾಸಿ ಸೈಯದ್ ಅತೀಕ್ ಬಂಧಿತನಾಗಿದ್ದು, ಆರೋಪಿಯಿಂದ 107 ಗ್ರಾಂ ಚಿನ್ನಾಭರಣ ಹಾಗೂ 1 ಆಟೋ ಸೇರಿದಂತೆ ₹6.5 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಸಾವಿರಾರು ಆಟೋಗಳ ಶೋಧ:

ಅತೀಕ್‌ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ಕೆಲ ದಿನಗಳ ಹಿಂದೆ ತಮಿಳುನಾಡಿಗೆ ತೆರಳಲು ಕೆ.ಆರ್‌.ಪುರ ರೈಲ್ವೆ ನಿಲ್ದಾಣಕ್ಕೆ ಸೈಯದ್ ಆಟೋದಲ್ಲಿ ತಮ್ಮ ಇಬ್ಬರು ಮಕ್ಕಳ ಜತೆ ಮಹಿಳೆಯೊಬ್ಬರು ತೆರಳಿದ್ದರು. ಆ ವೇಳೆ ರೈಲ್ವೆ ನಿಲ್ದಾಣದಲ್ಲಿ ಅವರನ್ನು ನಿಲ್ಲಿಸಿದ ಬಳಿಕ ಪ್ರಯಾಣಿಕರು ಬ್ಯಾಗ್ ತೆಗೆದು ಕೊಳ್ಳುವ ಮುನ್ನವೇ ಬಾಡಿಗೆ ಪಡೆದು ಆಟೋ ಚಾಲಕ ತೆರಳಿದ್ದಾನೆ. ಈ ಬಗ್ಗೆ ರಾಮಮೂರ್ತಿನಗರ ಠಾಣೆಗೆ ಅವರು ದೂರು ಸಲ್ಲಿಸಿದರು. ತನಿಖೆಗಿಳಿದ ಪೊಲೀಸರು, ರೈಲ್ವೆ ನಿಲ್ದಾಣದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆಟೋ ನೋಂದಣಿ ಸಂಖ್ಯೆ ಅಸ್ಪಷ್ಟವಾಗಿ ಪತ್ತೆಯಾಗಿದೆ. ಬಳಿಕ ಬೆಂಗಳೂರು ನಗರದ ಸುಮಾರು 10 ಸಾವಿರಕ್ಕೂ ಅಧಿಕ ಆಟೋಗಳನ್ನು ಶೋಧಿಸಿದಾಗ ಕೊನೆಗೆ ಆರೋಪಿ ಸಿಕ್ಕಿಬಿದ್ದಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.