ಬೆಂಗಳೂರು: ಪತ್ನಿ ಬಗ್ಗೆ ಹಗುರ ಮಾತಾಡಿದ್ದಕ್ಕೆ 16 ಬಾರಿ ಇರಿದ!

| Published : Mar 16 2024, 01:47 AM IST / Updated: Mar 16 2024, 08:48 AM IST

ಬೆಂಗಳೂರು: ಪತ್ನಿ ಬಗ್ಗೆ ಹಗುರ ಮಾತಾಡಿದ್ದಕ್ಕೆ 16 ಬಾರಿ ಇರಿದ!
Share this Article
  • FB
  • TW
  • Linkdin
  • Email

ಸಾರಾಂಶ

‘ನಿನ್ನ ಹೆಂಡ್ತಿ ಚೆಂದವಾಗಿದ್ದಾಳೆ. ಅವಳನ್ನೇ ನನ್ನೊಂದಿಗೆ ಕಳುಹಿಸಿ ನಿನಗೆ ಕೇಳಿದಷ್ಟು ಹಣ ಕೊಡುತ್ತೇನೆ’ ಎಂದ ಕೃಷ್ಣ ಯಾದವ್ ಎಂಬಾತನನ್ನು ಸಂತೋಷ್ ಕ್ರೋದಗೊಂಡವನೇ 16 ಬಾರಿ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತನ್ನ ಪತ್ನಿಯನ್ನು ಮಜಾ ಮಾಡಲು ಕಳುಹಿಸುವಂತೆ ಹೇಳಿದ ಕಾರಣಕ್ಕೆ ಸಿಟ್ಟಿಗೆದ್ದು ರಿಯಲ್ ಎಸ್ಟೇಟ್ ಏಜೆಂಟ್‌ಗೆ 16 ಬಾರಿ ಚಾಕುವಿನಿಂದ ಇರಿದು ಹತ್ಯೆಗೈದಿದ್ದ ಮೃತನ ಗೆಳೆಯನನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಮೃತಹಳ್ಳಿ ಸಮೀಪದ ನಿವಾಸಿ ಸಂತೋಷ್ ಬಂಧಿತನಾಗಿದ್ದು, ಇತ್ತೀಚಿಗೆ ಬಾಗಲೂರು ಸಮೀಪ ರಿಯಲ್ ಎಸ್ಟೇಟ್ ಉದ್ಯಮಿ ಕೃಷ್ಣಯಾದವ್ ಕೊಲೆಯಾಗಿತ್ತು. 

ಈ ಬಗ್ಗೆ ತನಿಖೆಗಿಳಿದ ಪೊಲೀಸರು, ಶಂಕೆ ಮೇರೆಗೆ ಮೃತನ ಸ್ನೇಹಿತರನ್ನು ಒಬ್ಬೊಬ್ಬರನ್ನಾಗಿ ವಿಚಾರಣೆಗೊಳಪಡಿಸಿದಾಗ ಕೊನೆಗೆ ಸಂತೋಷ್ ಸಿಕ್ಕಿಬಿದ್ದಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಹಣ ಕೊಡುವೆ ನನ್ನೊಂದಿಗೆ ನಿನ್ನ ಹೆಂಡ್ತಿ ಕಳುಹಿಸು: ಬಟ್ಟೆ ವ್ಯಾಪಾರ ಮಾಡುತ್ತಿದ್ದ ಸಂತೋಷ್‌, ತನ್ನ ಕುಟುಂಬದ ಜತೆ ನೆಲೆಸಿದ್ದ. ಹಲವು ದಿನಗಳ ಹಿಂದೆ ಆತನಿಗೆ ಅಮೃತಹಳ್ಳಿ ಸಮೀಪದ ದಾಸರಹಳ್ಳಿಯ ಮೊಬೈಲ್‌ ಮಾರಾಟ ಅಂಗಡಿ ಬಳಿ ರಿಯಲ್ ಎಸ್ಟೇಟ್ ಉದ್ಯಮಿ ಕೃಷ್ಣ ಯಾದವ್ ಪರಿಚಯವಾಗಿತ್ತು. 

ಆಗ ಸಂತೋಷ್‌ಗೆ ‘ನಿನಗೆ ಅಂಗಡಿ ತೆರೆಯಲು ಆರ್ಥಿಕ ನೆರವು ನೀಡುವುದಾಗಿ’ ಕೃಷ್ಣ ಭರವಸೆ ಕೊಟ್ಟಿದ್ದ. ಇತ್ತ ಸಾಲದ ಸುಳಿಯಲ್ಲಿ ಸಿಲುಕಿದ್ದ ಆರೋಪಿಗೆ ಗೆಳೆಯ ಸಹಾಯ ಹಸ್ತ ಚಾಚಿದ್ದು ಸಮಾಧಾನ ತಂದಿತ್ತು. 

ಆದರೆ ಮಾತಿನಂತೆ ಹಣ ನೀಡದೆ ಏನೇನೂ ಸಬೂಬು ಹೇಳಿ ಸಂತೋಷ್‌ನನ್ನು ಕೃಷ್ಣಯಾದವ್ ಸಾಗ ಹಾಕುತ್ತಿದ್ದ ಎನ್ನಲಾಗಿದೆ. ಇನ್ನು ಮಾರುತಿನಗರದಲ್ಲಿ ಪತ್ನಿ ಹಾಗೂ ಮಕ್ಕಳ ಜತೆ ವಾಸವಾಗಿದ್ದ ಆಂಧ್ರಪ್ರದೇಶ ಮೂಲದ ಕೃಷ್ಣಯಾದವ್, ನಗರದಲ್ಲಿ ರಿಯಲ್ ಎಸ್ಟೇಟ್ ಮಾಡುತ್ತಿದ್ದ. 

ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದ ಆತನಿಗೆ ಹೆಂಗಸರ ಖಯಾಲಿ ಇತ್ತು. ಪರಸ್ತ್ರೀಯರ ಸಂಗ ಬಯಸಿಯೇ ಅಡ್ಡಾಡುತ್ತಿದ್ದ ಕೃಷ್ಣ ಯಾದವ್‌, ಇದಕ್ಕಾಗಿಯೇ ದಾಸರಹಳ್ಳಿ ಮೊಬೈಲ್ ಅಂಗಡಿ ಬಳಿ ಸಹ ಬೀಟ್ ಹಾಕುತ್ತಿದ್ದ. 

ಅಂತೆಯೇ ತನ್ನ ಬಳಿ ಹಣ ಕೇಳಲು ಸೋಮವಾರ ಸಂಜೆ ಬಂದ ಸಂತೋಷ್‌ನನ್ನು ಕರೆದುಕೊಂಡು ಕಾರಿನಲ್ಲಿ ಹೆಂಗಸರ ಸಾಂಗತ್ಯಕ್ಕಾಗಿ ಕೃಷ್ಣ ಯಾದವ್ ಹುಡುಕಾಟ ನಡೆಸಿದ್ದ. ಆದರೆ ಆ ದಿನ ಆತನಿಗೆ ಯಾವ ಮಹಿಳೆಯರು ಸಹ ಸಿಕ್ಕಿಲ್ಲ. 

ಕೊನೆಗೆ ಬಾಗಲೂರು ಕ್ರಾಸ್ ಸಮೀಪ ಕಾರು ನಿಲ್ಲಿಸಿಕೊಂಡು ಇಬ್ಬರು ಮದ್ಯ ಸೇವಿಸಿದ್ದಾರೆ. ಆ ವೇಳೆ ಸಂತೋಷ್ ಮೊಬೈಲ್‌ನಲ್ಲಿ ಆತನ ಎರಡನೇ ಪತ್ನಿ ಭಾವಚಿತ್ರ ಕೃಷ್ಣಯಾದವ್‌ನ ಕಣ್ಣಿಗೆ ಬಿದ್ದಿದೆ. 

ಆಗ ‘ನಿನ್ನ ಹೆಂಡ್ತಿ ಚೆಂದವಾಗಿದ್ದಾಳೆ. ಅವಳನ್ನೇ ನನ್ನೊಂದಿಗೆ ಕಳುಹಿಸಿ ನಿನಗೆ ಕೇಳಿದಷ್ಟು ಹಣ ಕೊಡುತ್ತೇನೆ’ ಎಂದಿದ್ದಾನೆ. ಈ ಮಾತಿಗೆ ಕೆರಳಿದ ಸಂತೋಷ್‌, ನಿನಗೆ ವಯಸ್ಸಾದರೂ ಹುಡುಗಿಯರು ಬೇಕಾ ಎಂದು ಕೂಗಾಡಿದ್ದಾನೆ. 

ಬಳಿಕ ಸಿಟ್ಟಿನ ಭರದಲ್ಲಿ ತನ್ನ ಜೇಬಿನಲ್ಲಿದ್ದ ಚಾಕು ತೆಗೆದು ಕೃಷ್ಣ ಯಾದವ್‌ಗೆ ಮನಬಂದಂತೆ 16 ಬಾರಿ ಇರಿದು ಭೀಕರವಾಗಿ ಹತ್ಯೆಗೈದಿದ್ದಾನೆ. ತರುವಾಯ ಕಾರನ್ನು ಬಾಗಲೂರು ಕ್ರಾಸ್ ಬಳಿ ನಿಲ್ಲಿಸಿ ಆರೋಪಿ ಪರಾರಿಯಾಗಿದ್ದ. 

ಮರುದಿನ ಅನಾಥವಾಗಿ ನಿಂತಿದ್ದ ಕಾರನ್ನು ನೋಡಿ ಶಂಕೆಗೊಂಡು ಪೊಲೀಸರಿಗೆ ಸ್ಥಳೀಯರು ತಿಳಿಸಿದ್ದರು. ಅಂತೆಯೇ ಘಟನಾ ಸ್ಥಳಕ್ಕೆ ಪೊಲೀಸರು ತೆರಳಿದ್ದಾಗ ಕಾರಿನಲ್ಲಿ ಮೃತದೇಹ ಪತ್ತೆಯಾಗಿತ್ತು. 

ಗೆಳೆಯರು ಹೇಳಿದ ರಾಸಲೀಲೆ: ಈ ಕೊಲೆ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆರಂಭದಲ್ಲಿ ರಿಯಲ್ ಎಸ್ಟೇಟ್ ವಿಚಾರವಾಗಿ ಹತ್ಯೆ ನಡೆದಿರಬಹುದು ಶಂಕಿಸಿದ್ದರು. ಈ ಹಿನ್ನಲೆಯಲ್ಲಿ ಮೃತನ ಸ್ನೇಹಿತರನ್ನು ವಿಚಾರಣೆಗೊಳಪಡಿಸಿದಾಗ ಕೃಷ್ಣನ ಲೀಲೆಗಳು ಬಯಲಾಗಿವೆ. 

ಆಗ ಕೃಷ್ಣಯಾದವ್‌ಗೆ ಯಾರೊಂದಿಗೆ ಒಡನಾಟವಿತ್ತು. ಕೊಲೆಯಾದ ದಿನ ಯಾರೊಂದಿಗೆ ಓಡಾಡಿದ್ದರು ಎಂಬುದನ್ನು ಕೆದಕಿದಾಗ ಸಂತೋಷ್‌ ಸಂಗತಿ ಗೊತ್ತಾಗಿದೆ. 

ಈ ಸುಳಿವು ಆಧರಿಸಿ ತನಿಖೆಗಿಳಿದ ಪೊಲೀಸರು, ದಾಸರಹಳ್ಳಿ ಮೊಬೈಲ್ ಅಂಗಡಿ ಬಳಿ ಆತನನ್ನು ವಶಕ್ಕೆ ಪಡೆದು ಠಾಣೆ ಕರೆತಂದು ವಿಚಾರಣೆಗೊಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. 

ಇನ್ನು ಆರೋಪಿ ಸಂತೋಷ್‌ ಕ್ರಿಮಿನಲ್ ಹಿನ್ನಲೆಯುವಳ್ಳವನಾಗಿದ್ದು, ಸದಾ ಜೇಬಿನಲ್ಲಿ ಚಾಕು ಇಟ್ಟುಕೊಂಡೇ ಆತ ಅಡ್ಡಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.