ಸಾರಾಂಶ
ಬೆಂಗಳೂರು : ನೈಋತ್ಯ ರೈಲ್ವೆ ಸುರಕ್ಷತಾ ದಳವು (ಆರ್‌ಪಿಎಫ್) ‘ನನ್ಹೆ ಫರಿಸ್ತೆಹ್’ ಕಾರ್ಯಕ್ರಮದ ಅಡಿ ಏಪ್ರಿಲ್ ತಿಂಗಳಲ್ಲಿ 4 ಬಾಲಕಿಯರು ಸೇರಿ ವಿವಿಧ ರಾಜ್ಯದ 22 ಮಕ್ಕಳನ್ನು ರಕ್ಷಿಸಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ವಿವಿಧ ಕಾರಣಗಳಿಂದ ಕುಟಂಬದಿಂದ ಬೇರ್ಪಟ್ಟ ವಿವಿಧ ರಾಜ್ಯದ 18 ಗಂಡು ಮತ್ತು 4 ಹೆಣ್ಣು ಮಕ್ಕಳನ್ನು ರಕ್ಷಿಸಿ ಅವರ ಕುಟುಂಬದ ಜೊತೆಗೆ ಸುರಕ್ಷಿತವಾಗಿ ಮರಳಿ ಸೇರಿಸಲಾಗಿದೆ. ರೈಲು, ರೈಲ್ವೆ ನಿಲ್ದಾಣದಲ್ಲಿ ಹಾಗೂ ಟ್ರ್ಯಾಕ್ ಬಳಿ ಈ ಮಕ್ಕಳು ಸಿಕ್ಕಿದ್ದರು.
ಇದೇ ವೇಳೆ ಆಪರೇಷನ್ ಉಪಲಬ್ದ್ ಅಡಿಯಲ್ಲಿ ಕಾಯ್ದಿರಿಸುವ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ 24 ದಲ್ಲಾಳಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಇವರಿಂದ ₹2.88 ಲಕ್ಷ ಮೌಲ್ಯದ 64 ಕಾಯ್ದಿರಿಸಿದ ಟಿಕೆಟ್‌ಗಳನ್ನು, ₹10.79 ಲಕ್ಷ ಮೌಲ್ಯದ ಬಳಸಿದ ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಪರೇಷನ್ ನಾರ್ಕೋಸ್ ಅಡಿಯಲ್ಲಿ ಆರು ಪ್ರಕರಣಗಳಿಂದ ₹49.90 ಲಕ್ಷ ಮೌಲ್ಯದ 50.885 ಕೇಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಮೂರು ಆರೋಪಿಗಳು ಬಂಧಿತರಾಗಿದ್ದಾರೆ.
ಇನ್ನು, ‘ಆಪರೇಷನ್ ಸತಾರ್ಕ್’ ಅಡಿಯಲ್ಲಿ 42 ಪ್ರಕರಣಗಳನ್ನು ದಾಖಲಿಸಿಕೊಂಡು ₹8.43 ಲಕ್ಷ ಮೌಲ್ಯದ 961 ಮದ್ಯ ಬಾಟಲಿಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಅಕ್ರಮ ಸಾಗಾಟ ಮಾಡುವವರ ವಿರುದ್ಧ ಮುಂದಿನ ಕಾನೂನು ಕ್ರಮಕ್ಕೆ ಅಬಕಾರಿ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.