ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿಯಲ್ಲಿ ಭದ್ರತೆಗೆ ಖಾಸಗಿ ಹಾಗೂ ಸರ್ಕಾರಿ ವಲಯ ಸೇರಿ ಒಟ್ಟು 5.35 ಲಕ್ಷ ಸಿಸಿಟಿವಿ ಕ್ಯಾಮೆರಾಗಳು ಕಣ್ಗಾವಲಿಟ್ಟಿದ್ದು, ಕಳೆದ ವರ್ಷದ ಅವಧಿಯಲ್ಲಿ ದಾಖಲೆಯ 3 ಲಕ್ಷ ಕ್ಯಾಮೆರಾಗಳು ನಗರದಲ್ಲಿ ಅಳವಡಿಕೆಯಾಗಿವೆ.ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯುಕ್ತ ಬಿ.ದಯಾನಂದ್ ಅವರು, ನಗರದಲ್ಲಿ ಪೊಲೀಸ್ ಇಲಾಖೆಯ ಜಿಯೋ ಟ್ಯಾಗಿಂಗ್ ಒಳಗೊಂಡ 5.35 ಲಕ್ಷ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದರು.
ಮೊಬೈಲ್ ಕಾಂಪೇನಿಯಿನ್ ಫಾರ್ ಕ್ರೈಂ ಆ್ಯಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್ ಆ್ಯಂಡ್ ಸಿಸ್ಟಮ್ (ಎಂಸಿಸಿಟಿಎನ್‌ಎಸ್) ಯೋಜನೆಯಡಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜಿಯೋ ಟ್ಯಾಗಿಂಗ್ ಕಾರ್ಯ ನಿರ್ವಹಿಸಲಿವೆ. ಕಳೆದ ತಿಂಗಳವರೆಗೆ ನಗರದಲ್ಲಿ ಎಂಸಿಸಿಟಿಎನ್‌ಎಸ್ ಡೆವಲಪ್‌ಮೆಂಟ್ ದತ್ತಾಂಶದ ಅನ್ವಯ 5,35, 815 ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.2024ರ ಜನವರಿ 1ರವರೆಗೆ 2,32,711 ಕ್ಯಾಮೆರಾಗಳಿದ್ದವು. ಆದರೆ ಒಂದು ವರ್ಷದ ಅವಧಿಯಲ್ಲಿ 3 ಲಕ್ಷಕ್ಕೂ ಅಧಿಕ ಹೊಸ ಕ್ಯಾಮೆರಾಗಳನ್ನು ಜಿಯೋ ಟ್ಯಾಗ್ ಮಾಡಿರುವುದು ದಾಖಲೆಯಾಗಿದೆ. ನಗರ ವ್ಯಾಪ್ತಿಯ ವಸತಿ ಪ್ರದೇಶ, ವಾಣಿಜ್ಯ ವಲಯಗಳು, ಮುಖ್ಯರಸ್ತೆ, ಸಿಗ್ನಲ್, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಬ್ಯಾಂಕ್, ಬಸ್ ನಿಲ್ದಾಣಗಳು, ರೈಲ್ವೆ ಹಾಗೂ ಮೆಟ್ರೋ ಸೇರಿದಂತೆ ಸಾರ್ವಜನಿಕ ಸೇರುವ ಸ್ಥಳಗಳಲ್ಲಿ ಕ್ಯಾಮೆರಾಗಳ ಕಣ್ಗಾವಲಿದೆ ಎಂದು ಹೇಳಿದರು.
ಕಳೆದ ವರ್ಷ ಭರವಸೆ ನೀಡಿದಂತೆ ಈ ವರ್ಷಾಂತ್ಯಕ್ಕೆ 5 ಲಕ್ಷ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಕಾರ್ಯ ಪೂರ್ಣವಾಗಬೇಕಿತ್ತು. ಆದರೆ, ನಿಗದಿತ ಸಮಯಕ್ಕಿಂತ ಮುನ್ನವೇ ಗುರಿ ಮುಟ್ಟಲಾಗಿದೆ. ಈ ಕ್ಯಾಮರಾ ಅಳವಡಿಕೆಯಿಂದ ಸಾರ್ವಜನಿಕ ವಲಯದಲ್ಲಿ ಅನುಕೂಲವಾಗಲಿದೆ ಎಂದು ತಿಳಿಸಿದರು. ನಾಗರಿಕ ಸುರಕ್ಷತಾ ಕಾಯ್ದೆಯನ್ವಯ ಅಳವಡಿಸಲಾದ ಕ್ಯಾಮೆರಾಗಳು, ನಗರ ಸುರಕ್ಷಾತ ಯೋಜನೆ, ಬಿಬಿಎಂಪಿ, ಸ್ಥಳೀಯ ಸಂಸ್ಥೆಗಳು, ಸ್ವಂತ ಮನೆಗಳು, ಸಂಘ ಸಂಸ್ಥೆಗಳು, ವಾಣಿಜ್ಯ ವಲಯಗಳು, ಬೇಕರಿ, ಹೋಟೆಲ್, ರೆಸ್ಟೋರೆಂಟ್ ಹಾಗೂ ಟೀ ಅಂಗಡಿ ಹೀಗೆ ಪ್ರತಿಯೊಂದರ ಕಟ್ಟಡಗಳಲ್ಲಿ ಹಾಕಿರುವ ಕ್ಯಾಮೆರಾಗಳ ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದರು.ನಿಖರ ಮಾಹಿತಿಯಿಂದ ತನಿಖೆಗೆ ಅನುಕೂಲ:
ನಗರದಲ್ಲಿ ಅಳವಡಿಸಿರುವ 5 ಲಕ್ಷ ಕ್ಯಾಮೆರಾಗಳನ್ನು ಜಿಯೋ ಟ್ಯಾಗಿಂಗ್ ಮಾಡಿ ಎಂಸಿಸಿಟಿಎನ್‌ಎಸ್ ಪೋರ್ಟಾಲ್‌ಗೆ ಸಂಪರ್ಕಿಸಲಾಗಿದೆ. ಡಿಜಿಟಲ್ ಜಿಯೋ ಟ್ಯಾಗಿಂಗ್ ಡಾಟಾ ಪೊಲೀಸ್ ಇಲಾಖೆಗೆ ನಿಖರ ಮಾಹಿತಿ ಸಿಗಲಿದೆ. ಕಮಿಷನರೇಟ್‌ನಲ್ಲಿ ಸರಹದ್ದಿನಲ್ಲಿ ಎಲ್ಲಿಯೇ ಅಪರಾಧ ಕೃತ್ಯಗಳು, ಅಹಿತಕರ ಘಟನೆಗಳು ಹಾಗೂ ಅಪಘಾತಗಳ ಸಂಭವಿಸಿದರೆ ತಕ್ಷಣವೇ ಆ ಸ್ಥಳದಲ್ಲಿರುವ ಕ್ಯಾಮೆರಾಗಳಿಂದ ಮಾಹಿತಿ ಪಡೆಯಬಹುದು. ಈ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿ ಆಧರಿಸಿ ತನಿಖೆ ನಡೆಸಲು ಅನುಕೂಲವಾಗಲಿದೆ ಎಂದು ಬಿ.ದಯಾನಂದ್ ಹೇಳಿದರು.ನಗರ ಪೊಲೀಸ್ ಮತ್ತು ಎಂಸಿಸಿಟಿಎನ್‌ಎಸ್ ಅಭಿವೃದ್ಧಿಪಡಿಸಿದ ಈ ಕ್ಯಾಮೆರಾ ಭವಿಷ್ಯದಲ್ಲಿ ಸ್ಮಾರ್ಟ್ ಗಸ್ತು ವ್ಯವಸ್ಥೆ, ಡಿಜಿಟಲ್ ನಗರ ಭದ್ರತಾ ವ್ಯವಸ್ಥೆ ಮತ್ತು ವಿಶ್ಲೇಷಣಾ ತನಿಖೆ ಯೋಜನೆಗಳಿಗೆ ಭದ್ರ ಅಡಿಪಾಯವಾಗಲಿದೆ. ಅಪರಾಧ ಪ್ರಕರಣಗಳ ತನಿಖೆಗೆ ಮಾತ್ರವಲ್ಲದೆ ನಾಗರಿಕರ ಸುರಕ್ಷತೆಗೆ ಸಹ ಮಹತ್ವದ ಪಾತ್ರವಹಿಸುತ್ತವೆ.
-ಬಿ.ದಯಾನಂದ್, ಪೊಲೀಸ್ ಆಯುಕ್ತರು, ಬೆಂಗಳೂರು ನಗರ