ಲಿವಿಂಗ್‌ ಟುಗೆದರ್‌ನಲ್ಲಿದ್ದಾಕೆ ನಂತರ ತನ್ನಿಂದ ಅಂತರ ಕಾಯ್ದುಕೊಂಡು ಮತ್ತೊಬ್ಬನ ಜತೆ ಸಲುಗೆ ಬೆಳೆಸಿದಳು ಎಂಬ ಕಾರಣಕ್ಕೆ 26 ವರ್ಷದ ಮಹಿಳೆಯನ್ನು 52 ವರ್ಷದ ಪ್ರಿಯಕರ ನಡು ರಸ್ತೆಯಲ್ಲೇ ಅಟ್ಟಾಡಿಸಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಅಮಾನುಷ ಘಟನೆ   ನಡೆದಿದೆ.

 ಬೆಂಗಳೂರು : ಲಿವಿಂಗ್‌ ಟುಗೆದರ್‌ನಲ್ಲಿದ್ದಾಕೆ ನಂತರ ತನ್ನಿಂದ ಅಂತರ ಕಾಯ್ದುಕೊಂಡು ಮತ್ತೊಬ್ಬನ ಜತೆ ಸಲುಗೆ ಬೆಳೆಸಿದಳು ಎಂಬ ಕಾರಣಕ್ಕೆ 26 ವರ್ಷದ ಮಹಿಳೆಯನ್ನು 52 ವರ್ಷದ ಪ್ರಿಯಕರ ನಡು ರಸ್ತೆಯಲ್ಲೇ ಅಟ್ಟಾಡಿಸಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಅಮಾನುಷ ಘಟನೆ ಬೆಂಗಳೂರಿನ ಹುಳಿಮಾವು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬನ್ನೇರುಘಟ್ಟ ಸಮೀಪದ ಬಿಲ್ವರದಹಳ್ಳಿ ನಿವಾಸಿ ವನಜಾಕ್ಷಿ (26) ಕೊಲೆಯಾದ ದುರ್ದೈವಿ. ಬನ್ನೇರುಘಟ್ಟ ರಸ್ತೆಯ ಹೊಮ್ಮದೇವನಹಳ್ಳಿಯಲ್ಲಿ ಶನಿವಾರ ಮಧ್ಯಾಹ್ನ ಸುಮಾರು 1 ಗಂಟೆಗೆ ಈ ಘಟನೆ ನಡೆದಿದೆ. ಈ ಸಂಬಂಧ ಮೃತಳ ಸಂಬಂಧಿ ಮುನಿಯಪ್ಪ ಎಂಬುವವರು ನೀಡಿದ ದೂರಿನ ಮೇರೆಗೆ ಮೃತಳ ಪ್ರಿಯಕರ ಬನ್ನೇರುಘಟ್ಟ ರಸ್ತೆಯ ಮಳೆನಲ್ಲಸಂದ್ರ ನಿವಾಸಿ ವಿಠಲ (52) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ?:

ಕೊಲೆಯಾದ ವನಜಾಕ್ಷಿ ಈ ಹಿಂದೆ ಮಧು ಎಂಬಾತನೊಂದಿಗೆ ಮದುವೆಯಾಗಿದ್ದರು. ದಾಂಪತ್ಯದಲ್ಲಿ ಬಿರುಕು ಮೂಡಿದ ಪರಿಣಾಮ 3 ವರ್ಷಗಳ ಹಿಂದೆ ಪತಿಯನ್ನು ತೊರೆದು ಮಗನೊಂದಿಗೆ ಬಿಲ್ವರದಹಳ್ಳಿಯಲ್ಲಿ ನೆಲೆಸಿದ್ದರು. 6 ತಿಂಗಳ ಹಿಂದೆಯಷ್ಟೇ ಈಕೆಯ ಗಂಡ ಮೃತಪಟ್ಟಿದ್ದರು. ಈ ನಡುವೆ ಕಳೆದ 3 ವರ್ಷಗಳ ಹಿಂದೆ ಕ್ಯಾಬ್‌ ಚಾಲಕ ವಿಠಲನ ಪರಿಚಯವಾಗಿ ಇಬ್ಬರೂ ಸಹಜೀವನ (ಲಿವಿಂಗ್‌ ಟುಗೆದರ್‌) ನಡೆಸುತ್ತಿದ್ದರು.

ಆರೋಪಿ ವಿಠಲ್‌ಗೆ ಈ ಹಿಂದೆ 2 ಮದುವೆಯಾಗಿದ್ದವು. ಮೊದಲ ಪತ್ನಿ ಮೃತಪಟ್ಟಿದ್ದರೆ, ಎರಡನೇ ಪತ್ನಿ ಈತನನ್ನು ತೊರೆದು ಬೇರೊಬ್ಬನ ಜತೆಗೆ ನೆಲೆಸಿದ್ದಳು. ಬಳಿಕ ವಿಠಲ್‌ ಈ ವನಜಾಕ್ಷಿಯ ಸ್ನೇಹ ಸಂಪಾದಿಸಿ ನಂತರ ಇಬ್ಬರೂ ಸಹಜೀವನ ನಡೆಸುತ್ತಿದ್ದರು.

ಆದರೆ, ಇತ್ತೀಚೆಗೆ ವನಜಾಕ್ಷಿ, ವಿಠಲ್‌ನಿಂದ ಅಂತರ ಕಾಯ್ದುಕೊಂಡಿದ್ದಳು. ಮುನಿಯಪ್ಪ ಎಂಬಾತನ ಜತೆಗೆ ಸಲುಗೆ ಬೆಳೆಸಿದ್ದಳು. ಈ ವಿಚಾರವಾಗಿ ಕೆಲ ದಿನಗಳಿಂದ ವಿಠಲ್‌ ಮತ್ತು ವನಜಾಕ್ಷಿ ನಡುವೆ ಜಗಳವಾಗುತ್ತಿತ್ತು ಎನ್ನಲಾಗಿದೆ.

ಆಸ್ಪತ್ರೆಗೆ ಹೋಗುವಾಗ ಹಿಂಬಾಲಿಸಿದ:

ಕಳೆದ ಶನಿವಾರ ವನಜಾಕ್ಷಿ ಅವರ ಸಹೋದರಿ ರಾಜೇಶ್ವರಿ ಅವರ ಪುತ್ರನಿಗೆ ಅನಾರೋಗ್ಯದ ಕಾರಣ ಕೋರಮಂಗಲದ ಸೆಂಟ್‌ ಜಾನ್ಸ್‌ ಆಸ್ಪತ್ರೆಗೆ ದಾಖಲಿಸಿದ್ದಳು. ಈ ವಿಚಾರ ತಿಳಿದು ವನಜಾಕ್ಷಿ, ತನ್ನ ಸಂಬಂಧಿ ಮುನಿಯಪ್ಪನಿಗೆ ಕರೆ ಮಾಡಿ ಬರುವಂತೆ ಕರೆದಿದ್ದಳು. ಅದರಂತೆ ಮುನಿಯಪ್ಪ ಮಧ್ಯಾಹ್ನ ಸುಮಾರು 12 ಗಂಟೆಗೆ ಮನೆ ಬಳಿ ತೆರಳಿ ವನಜಾಕ್ಷಿ ಹಾಗೂ ಆಕೆಗೆ ಪರಿಚಯವಿರುವ ಲಕ್ಷ್ಮಮ್ಮ ಅವರನ್ನು ತನ್ನ ಸ್ಯಾಂಟ್ರೋ ಕಾರಿನಲ್ಲಿ ಕೂರಿಸಿಕೊಂಡು ಕೋರಮಂಗಲದತ್ತ ಹೊರಟಿದ್ದ.

ಮಾರ್ಗ ಮಧ್ಯೆ ಅಟ್ಯಾಕ್‌:

ಈ ವೇಳೆ ವನಜಾಕ್ಷಿ ಸಹೋದರಿ ರಾಜೇಶ್ವರಿ ಅವರು ಕರೆ ಮಾಡಿ ತಾನು ಆಸ್ಪತ್ರೆಗೆ ಬರುವುದಾಗಿ ಹೇಳಿದ್ದಾರೆ. ಹೀಗಾಗಿ ಅವರಿಗೆ ಬಸವನಪುರದ ಬಳಿ ಬನ್ನಿ ಎಂದು ಹೇಳಿದ ಮುನಿಯಪ್ಪ ಕೋಳಿ ಫಾರಂ ಗೇಟ್‌ ಕಡೆಯಿಂದ ಹೊಮ್ಮದೇವನಹಳ್ಳಿ ಮುಖಾಂತರ ಬಸವನಪುರದತ್ತ ಹೊರಟಿದ್ದ. ಹೊಮ್ಮದೇವನಹಳ್ಳಿ ಬಳಿ ಹೋಗುವಾಗ ಹಿಂದಿನಿಂದ ಆರೋಪಿಯ ವಿಠಲ್‌ನ ಕಾರು ಬಂದಿದೆ. ಜೋರಾಗಿ ಹಲವು ಬಾರಿ ಹಾರ್ನ್‌ ಮಾಡಿದ್ದಾನೆ. ಈ ವೇಳೆ ಮುಂದೆ ಶಾಲಾ ಬಸ್‌ ಹೋಗುತ್ತಿದ್ದರಿಂದ ಮುನಿಯಪ್ಪ ತನ್ನ ಸ್ಯಾಂಟ್ರೋ ಕಾರನ್ನು ನಿಧಾನ ಮಾಡಿ ನಿಲ್ಲಿಸಿದ್ದಾನೆ.

ಕಾರು ಸಮೇತ ಸುಡಲು ಯತ್ನ:

ತಕ್ಷಣ ಕಾರಿನಿಂದಿಳಿದ ವಿಠಲ್‌, ಸುಮಾರು 5 ಲೀಟರ್‌ ಪೆಟ್ರೋಲ್‌ ತುಂಬಿದ ಕ್ಯಾನ್‌ನೊಂದಿಗೆ ಸ್ಯಾಂಟ್ರೋ ಕಾರಿನತ್ತ ಧಾವಿಸಿ ಬಂದಿದ್ದಾನೆ. ಬಳಿಕ ಏಕಾಏಕಿ ಕಾರಿನ ಮೇಲೆ ಪೆಟ್ರೋಲ್‌ ಸುರಿದಿದ್ದಾನೆ. ಈ ವೇಳೆ ಗಾಬರಿಗೊಂಡು ಮುನಿಯಪ್ಪ ಮತ್ತು ವನಜಾಕ್ಷಿ ಕಾರಿನಿಂದ ಕೆಳಗೆ ಇಳಿದಿದ್ದಾರೆ. ಆಗ ವಿಠಲ್‌, ಮುನಿಯಪ್ಪನ ಮೇಲೂ ಪೆಟ್ರೋಲ್‌ ಎರಚಿದ್ದಾನೆ. ಬಳಿಕ ಮುನಿಯಪ್ಪ ಮತ್ತು ವನಜಾಕ್ಷಿ ತಪ್ಪಿಸಿಕೊಂಡು ಓಡಲು ಆರಂಭಿಸಿದ್ದಾರೆ.

ಬೆನ್ನಟ್ಟಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ:

ಈ ವೇಳೆ ವನಜಾಕ್ಷಿ ಸ್ವಲ್ಪ ದೂರ ಓಡಿ ಎಡವಿ ಮಣ್ಣಿನ ರಸ್ತೆಗೆ ಬಿದ್ದಿದ್ದಾರೆ. ಅಷ್ಟರಲ್ಲಿ ಬೆನ್ನಟ್ಟಿ ಬಂದಿದ್ದ ವಿಠಲ್‌, ಏಕಾಏಕಿ ವನಜಾಕ್ಷಿ ಮೇಲೆ ಪೆಟ್ರೋಲ್‌ ಸುರಿದು ಲೈಟರ್‌ನಿಂದ ಬೆಂಕಿ ಹಚ್ಚಿದ್ದಾನೆ. ಈ ವೇಳೆ ಸ್ಥಳೀಯ ವ್ಯಕ್ತಿಯೊಬ್ಬರು ವಿಠಲ್‌ ಕೈನಿಂದ ಪೆಟ್ರೋಲ್‌ ಕ್ಯಾನ್‌ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೂ ವಿಠಲ್‌ ಜಗ್ಗದೇ ಬೆಂಕಿ ಹಚ್ಚಿದ್ದಾನೆ. ಈ ವೇಳೆ ಆತನಿಗೂ ಬೆಂಕಿ ತಾಕಿದೆ. ಬಳಿಕ ಆತ ತನ್ನ ಅಂಗಿಯನ್ನು ಬಚ್ಚಿ ಎಸೆದು ಸ್ಥಳದಿಂದ ಪರಾರಿಯಾಗಿದ್ದಾನೆ.

ಚಿಕಿತ್ಸೆ ಫಲಿಸದೆ ಸಾವು:

ಬಳಿಕ ಸ್ಥಳೀಯರು ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ವನಜಾಕ್ಷಿ ನೆರವಿಗೆ ಧಾವಿಸಿದ್ದು, ಬೆಡ್‌ ಶೀಟ್‌, ಮ್ಯಾಟ್‌ ಬಳಸಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ಶೇ.60ರಷ್ಟು ಸುಟ್ಟ ಗಾಯಗಳೊಂದಿಗೆ ಕುಸಿದು ಬಿದ್ದಿದ್ದ ವನಜಾಕ್ಷಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆ ಹಿನ್ನೆಲೆಯಲ್ಲಿ ಸೇಂಟ್‌ ಜಾನ್ಸ್‌ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆ ಫಲಿಸದೆ ವನಜಾಕ್ಷಿ ಸೋಮವಾರ ಮುಂಜಾನೆ ಮೃತಪಟ್ಟಿದ್ದಾಳೆ.

ಈ ಸಂಬಂಧ ಮುನಿಯಪ್ಪ ನೀಡಿದ ದೂರಿನ ಮೇರೆಗೆ ಹುಳಿಮಾವು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ವಿಠಲ್‌ನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಗಿದ್ದೇನು?

- 3 ವರ್ಷದಿಂದ ಬನ್ನೇರುಘಟ್ಟ ಸಮೀಪದ ನಿವಾಸಿ ವನಜಾಕ್ಷಿ, ವಿಠಲ ಸಹಜೀವನ

- ಇತ್ತೀಚೆಗೆ ವಿಠಲನ ತೊರೆದು ಮುನಿಯಪ್ಪ ಎಂಬಾತಬ ಜತೆ ವನಕಾಕ್ಷಿ ಸಲುಗೆ

- ವಿಠ್ಠಲ-ವನಜಾಕ್ಷಿ ನಡುವೆ ಜಗಳ. ಇದರ ಬೆನ್ನಲ್ಲೇ ಆಕೆಯ ಕೊಲೆಗೆ ವಿಠಲ ಸಂಚು

- ಶನಿವಾರ ವನಜಾಕ್ಷಿ ಕಾರಲ್ಲಿದ್ದಾಗ ಕಾರಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ವಿಠಲ

- ಬಳಿಕ ಆಕೆ ಪಾರಾಗಲು ಯತ್ನಿಸಿದಾಗ ಆಕೆಯ ಮೇಲೂ ಪೆಟ್ರೋಲ್‌ ಹಾಕಿ ಬೆಂಕಿ

- ಶೇ.60 ಸುಟ್ಟಗಾಯದಿಂದ ವನಜಾಕ್ಷಿ ಆಸ್ಪತ್ರೆಗೆ. ಚಿಕಿತ್ಸೆ ಫಲಿಸದೇ ನಿನ್ನೆ ಸಾವು