ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಹಾಲಿನ ಟ್ಯಾಂಕರ್‌ಗೆ ಬೈಕ್ ಹಿಂದಿನಿಂದ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟು ಹಿಂಬದಿ ಸವಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ರುದ್ರಾಕ್ಷಿಪುರ ಗ್ರಾಮದ ಬಳಿ ಭಾನುವಾರ ಮಧ್ಯರಾತ್ರಿ ಜರುಗಿದೆ.
ತಾಲೂಕು ಚುಂಚಗಳ್ಳಿ ಗ್ರಾಮದ ನಿಂಗಯ್ಯ ಪುತ್ರ ಮರಲಿಂಗೇಗೌಡ (25) ಮೃತಪಟ್ಟ ಬೈಕ್ ಸವಾರ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮರಲಿಂಗೇಗೌಡ ಸ್ಥಳದಲ್ಲೇ ಕೊನೆ ಉಸಿರೆಳೆದಿದ್ದಾರೆ.
ಬೈಕ್ ಹಿಂಬದಿ ಸವಾರ ಮಧು 25 ತೀವ್ರ ಗಾಯಗೊಂಡಿದ್ದು ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದಲ್ಲಿ ಮೃತಪಟ್ಟಿರುವ ಮರಲಿಂಗೇಗೌಡ ತಾಲೂಕಿನ ಕೆಸ್ತೂರಿನ ಶ್ರೀನಿವಾಸ ಬಾರಿನಲ್ಲಿ ಸಪ್ಲೇಯರ್ ಕೆಲಸ ಮಾಡುತ್ತಿದ್ದನು. ಕಳೆದ 10 ತಿಂಗಳ ಹಿಂದೆ ವಿವಾಹ ವಾಗಿದ್ದರು.
ಬಾರ್ ಕೆಲಸ ಮುಗಿಸಿ ಸ್ನೇಹಿತ ಮಧು ಅವರೊಂದಿಗೆ ಸ್ವಗ್ರಾಮ ಚುಂಚಗಳ್ಳಿಗೆ ವಾಪಸ್ ಆಗುತ್ತಿದ್ದಾಗ ಬೆಂಗಳೂರು ಮೈಸೂರು ಹಳೆ ಹೆದ್ದಾರಿಯ ರುದ್ರಾಕ್ಷಿ ಪುರ ಬಳಿ ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಹಾಲಿನ ಕ್ಯಾಂಟರ್‌ಗೆ ಬೈಕ್ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಈ ಸಂಬಂಧ ಮದ್ದೂರು ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ನೃತ್ಯದ ವೇಳೆ ಮೈತಾಕಿದ್ದಕ್ಕೆ ಹತ್ಯೆ ಮಾಡಿದ ನಾಲ್ವರ ಸೆರೆ
ಬೆಂಗಳೂರು: ಶಿವರಾತ್ರಿ ಹಬ್ಬದ ಉತ್ಸವದಲ್ಲಿ ನೃತ್ಯ ಮಾಡುವ ವಿಚಾರಕ್ಕೆ ನಡೆದಿದ್ದ ಯುವಕನ ಕೊಲೆ ಪ್ರಕರಣ ಸಂಬಂಧ ಅಪ್ರಾಪ್ತ ಬಾಲಕ ಸೇರಿದಂತೆ ನಾಲ್ವರನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗಿರಿನಗರ ನಿವಾಸಿಗಳಾದ ಚೇತನ್, ರಂಗ, ಪವನ್ ಹಾಗೂ ಅಪ್ರಾಪ್ತ ಬಾಲಕ ಬಂಧಿತನಾಗಿದ್ದು, ಶಿವರಾತ್ರಿ ಹಬ್ಬದ ಶುಕ್ರವಾರ ರಾತ್ರಿ ಶ್ರೀನಗರ ನಿವಾಸಿ ಯೋಗೇಶ್ ಕುಮಾರ್ (23) ಎಂಬಾತನಿಗೆ ಚಾಕುವಿನಿಂದ ಇರಿದು ಆರೋಪಿಗಳು ಹತ್ಯೆಗೈದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಯೋಗೇಶ್ ಮಂಡ್ಯ ಜಿಲ್ಲೆ ಕೊಪ್ಪದವನಾಗಿದ್ದು, ಹಲವು ವರ್ಷಗಳಿಂದ ನಗರದಲ್ಲಿ ವಾಹನ ಸರ್ವೀಸ್ ಸೆಂಟರ್‌ನಲ್ಲಿ ಕೆಲಸ ಮಾಡಿಕೊಂಡು ಶ್ರೀನಗರದಲ್ಲಿ ನೆಲೆಸಿದ್ದ.
ಶಿವರಾತ್ರಿ ಹಬ್ಬದ ನಿಮಿತ್ತ ಮುನೇಶ್ವರ ಬ್ಲಾಕ್‌ನಲ್ಲಿದ್ದ ದೇವಾಲಯಕ್ಕೆ1.30ರ ಸುಮಾರಿಗೆ ರಾತ್ರಿ ಆತ ತೆರಳಿದ್ದ. ಆ ವೇಳೆ ಉತ್ಸವದಲ್ಲಿ ತಮಟೆ ಶಬ್ದಕ್ಕೆ ಕುಣಿಯುವಾಗ ಯೋಗೇಶ್ ಹಾಗೂ ಆರೋಪಿಗಳ ನಡುವೆ ಮೈ ತಾಕಿದ ವಿಚಾರಕ್ಕೆ ಜಗಳವಾಗಿದೆ.
ಇದರಿಂದ ಕೆರಳಿದ ಆೋಪಿಗಳು, ಯೋಗೇಶ್‌ಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಘಟನೆ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.