ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣ ಸಮೀಪ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಬುಧವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿ ಆರು ಮಂದಿ ಮೃತಪಟ್ಟಿದ್ದಾರೆ.

 ಬಸವನಬಾಗೇವಾಡಿ : ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣ ಸಮೀಪ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಬುಧವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿ ಆರು ಮಂದಿ ಮೃತಪಟ್ಟಿದ್ದಾರೆ.

ತೆಲಂಗಾಣ ರಾಜ್ಯದ ಗಡ್ವಾಳ ಮೂಲದ ವಿಜಯಪುರ ಜಿಲ್ಲೆಯ ಹೊರ್ತಿಯಲ್ಲಿ ಕೆನರಾ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಟಿ.ಭಾಸ್ಕರ್‌ (36), ಅವರ ಪತ್ನಿ ಪವಿತ್ರಾ (34), ಪುತ್ರ ಅಭಿರಾಮ (14), ಪುತ್ರಿ ಜೋತ್ಸ್ನಾ (12), ಕಾರು ಚಾಲಕ ಹೊರ್ತಿಯ ವಿಕಾಸ ಶಿವಪ್ಪ ಮಕನಿ (30) ಹಾಗೂ ಖಾಸಗಿ ಬಸ್‌ ಚಾಲಕ ಧಾರವಾಡ ಜಿಲ್ಲೆಯ ಗೊಪನಕೊಪ್ಪದ ಸಿದ್ರಾಮ ನಗರದ ಬಸವರಾಜ ಲಕ್ಕಪ್ಪ ಲಮಾಣಿ (48) ಮೃತಪಟ್ಟವರು. ಭಾಸ್ಕರ್‌ ಅವರ ಮತ್ತೊಬ್ಬ ಪುತ್ರ ಪ್ರವೀಣ ತೇಜ್‌ (10) ಅದೃಷ್ಟವಶಾತ್‌ ದುರ್ಘಟನೆಯಲ್ಲಿ ಪ್ರಾಣಾಪಾಯದಿಂದ ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಟಿ.ಭಾಸ್ಕರ್‌ ಅವರು ಕಳೆದ 15 ದಿನಗಳ ಹಿಂದಷ್ಟೇ ಕೆನರಾ ಬ್ಯಾಂಕ್‌ನ ಹೊರ್ತಿ ಶಾಖೆಯಲ್ಲಿ ಬ್ಯಾಂಕ್‌ ಮ್ಯಾನೇಜರ್‌ ಆಗಿ ನೇಮಕವಾಗಿದ್ದರು. ಕರ್ತವ್ಯಕ್ಕೆ ಹಾಜರಾಗಿ ಬಳಿಕ ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳಿದ್ದರು. ಮಹಿಂದ್ರಾ ಟಿಯುವಿ-300 ಕಾರಿನಲ್ಲಿ ತಮ್ಮ ಕುಟುಂಬದೊಂದಿಗೆ ಮುರುಡೇಶ್ವರ ಮತ್ತು ಧರ್ಮಸ್ಥಳ ಸೇರಿ ವಿವಿಧೆಡೆ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿಕೊಂಡು ಮಂಗಳವಾರ ರಾತ್ರಿ ಚಿತ್ರದುರ್ಗ-ವಿಜಯಪುರ ಹೆದ್ದಾರಿ ಮಾರ್ಗವಾಗಿ ಮರಳುತ್ತಿದ್ದರು. ಈ ವೇಳೆ ಬೆಳಗಿನ ಜಾವ ಸುಮಾರು 6.20ರ ವೇಳೆ ಮನಗೂಳಿ ಸಮೀಪ ಕಾರು ಏಕಾಏಕಿ ನಿಯಂತ್ರಣ ತಪ್ಪಿ, ರಸ್ತೆ ಮಧ್ಯದ ಡಿವೈಡರ್‌ ಏರಿದ್ದು, ಬಳಿಕ ಪಕ್ಕದ ರಸ್ತೆಯಲ್ಲಿ ವಿಜಯಪುರದಿಂದ ಹೊಸಪೇಟೆ ಕಡೆಗೆ ಹೊರಟಿದ್ದ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದೆ. ನಂತರ, ರಸ್ತೆ ಪಕ್ಕದಲ್ಲಿ ನಿಂತಿದ್ದ ಕಂಟೇನರ್‌ಗೆ ಬಂದು ಅಪ್ಪಳಿಸಿದೆ.

ಘಟನೆಗೆ ಕಾರು ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ರಸ್ತೆ ಮಧ್ಯದಲ್ಲಿಯೇ ಬಸ್‌ ಪಲ್ಟಿಯಾಗಿದೆ.