ಪಾರ್ಟಿ ವೇಳೆ ಕ್ಷುಲ್ಲಕ ವಿಚಾರಕ್ಕೆ ಜಗಳ: ರಿಪೀಸಿಂದ ಹಲ್ಲೆಗೈದು ಸ್ನೇಹಿತನ ಕೊಲೆ

| N/A | Published : May 15 2025, 01:45 AM IST / Updated: May 15 2025, 04:46 AM IST

Crime News

ಸಾರಾಂಶ

ಮದ್ಯದ ಪಾರ್ಟಿ ಮಾಡುವಾಗ ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆ ವೇಳೆ ಇಬ್ಬರು ಸೇರಿಕೊಂಡು ಸ್ನೇಹಿತನೊಬ್ಬನಿಗೆ ಮರದ ರಿಪೀಸ್‌ ಪಟ್ಟಿಯಿಂದ ಮಾರಣಾಂತಿಕ ಹಲ್ಲೆ ಮಾಡಿ ಹತ್ಯೆಗೈದಿರುವ ಘಟನೆ ಅಮೃತಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

 ಬೆಂಗಳೂರು : ಮದ್ಯದ ಪಾರ್ಟಿ ಮಾಡುವಾಗ ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆ ವೇಳೆ ಇಬ್ಬರು ಸೇರಿಕೊಂಡು ಸ್ನೇಹಿತನೊಬ್ಬನಿಗೆ ಮರದ ರಿಪೀಸ್‌ ಪಟ್ಟಿಯಿಂದ ಮಾರಣಾಂತಿಕ ಹಲ್ಲೆ ಮಾಡಿ ಹತ್ಯೆಗೈದಿರುವ ಘಟನೆ ಅಮೃತಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

ಕನಕನಗರ ನಿವಾಸಿ ಅಜೀಜ್‌ ಅಹಮದ್‌ (25) ಕೊಲೆಯಾದ ದುರ್ದೈವಿ. ಮೇ 8ರ ಮಧ್ಯರಾತ್ರಿ ಕಾವೇರಿ ಲೇಔಟ್‌ನ ಮರಿಯಣ್ಣನಪಾಳ್ಯದ ಕಲವರಿ ಬೆಟ್ಟಕ್ಕೆ ಹೋಗುವ 4ನೇ ಕ್ರಾಸ್‌ನಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಆರೋಪಿಗಳಾದ ಕಾವೇರಿ ಲೇಔಟ್‌ನ ಪವನ್‌ ಮತ್ತು ವೀರಮಣಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ಘಟನೆ ವಿವರ:

ಕೊಲೆಯಾದ ಅಜೀಜ್ ಅಹಮದ್‌ ಹಾಗೂ ಆರೋಪಿಗಳಾದ ಪವನ್‌ ಮತ್ತು ವೀರಮಣಿ ಸ್ನೇಹಿತರಾಗಿದ್ದು, ಮೂವರೂ ಕಟ್ಟಡಗಳಿಗೆ ಪೇಟಿಂಗ್‌ ಕೆಲಸ ಮಾಡುತ್ತಾರೆ. ಮೇ 8ರ ಮಧ್ಯರಾತ್ರಿ ಈ ಮೂವರು ಮರಿಯಣ್ಣಪಾಳ್ಯದ ಕಲವರಿ ಬೆಟ್ಟಕ್ಕೆ ಹೋಗುವ 4ನೇ ಕ್ರಾಸ್‌ನಲ್ಲಿ ಮದ್ಯ ಸೇವಿಸಿ ಪಾರ್ಟಿ ಮಾಡಿದ್ದಾರೆ. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಅಜೀಜ್‌ ಅಹಮದ್‌ ಮತ್ತು ಪವನ್‌ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿದಾಗ ಪವನ್‌ ಹಾಗೂ ವೀರಮಣಿ ಸೇರಿಕೊಂಡು ಮರದ ರಿಪೀಸ್‌ ಪಟ್ಟಿಯಿಂದ ಅಜೀಜ್‌ ಅಹಮದ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಅಪಘಾತವೆಂದು ಹೇಳಿ ಆಸ್ಪತ್ರೆಗೆ ದಾಖಲು:

ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಅಜೀಜ್‌ ಅಹಮದ್‌ ಕುಸಿದು ಬಿದ್ದಿದ್ದಾನೆ. ಮಾರನೇ ದಿನ ಬೆಳಗ್ಗೆ ವೀರಮಣಿ 108 ಆ್ಯಂಬುಲೆನ್ಸ್‌ ಕರೆಸಿ ಅಜೀಜ್‌ ಅಹಮದ್‌ಗೆ ಅಪಘಾತವಾಗಿದೆ ಎಂದು ಸುಳ್ಳು ಹೇಳಿ ನಿಮ್ಹಾನ್ಸ್‌ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ, ಮೇ 12ರ ಸಂಜೆ ಚಿಕಿತ್ಸೆ ಫಲಿಸದೆ ಅಜೀಜ್‌ ಅಹಮದ್‌ ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆಯಲ್ಲಿ ಅಜೀಜ್‌ನದು ಅಪಘಾತವಲ್ಲ ಬದಲಾಗಿ ಕೊಲೆ ಎಂಬುದು ಗೊತ್ತಾಗಿದೆ.

ಬಳಿಕ ಅಮೃತಹಳ್ಳಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಸ್ಥಳೀಯರನ್ನು ವಿಚಾರಿಸಿದಾಗ ಮೇ 8ರ ರಾತ್ರಿ ಮೂವರು ಗಲಾಟೆ ಮಾಡಿಕೊಳ್ಳುತ್ತಿದ್ದ ವಿಚಾರ ಗೊತ್ತಾಗಿದೆ. ಜತೆಗೆ ಇಬ್ಬರು ಸೇರಿಕೊಂಡು ಒಬ್ಬನ ಮೇಲೆ ಹಲ್ಲೆ ಮಾಡುತ್ತಿದ್ದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆ ಮೂವರ ಪೈಕಿ ಇದೇ ಏರಿಯಾದ ವೀರಮಣಿ ಎಂಬುವನು ಇದ್ದಿದ್ದಾಗಿ ತಿಳಿಸಿದ್ದಾರೆ. ನಂತರ ಪೊಲೀಸರು ವೀರಮಣಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಪಾರ್ಟಿ ವೇಳೆ ಗಲಾಟೆಯಾಗಿ ಅಜೀಜ್‌ ಅಹಮದ್‌ ಮೇಲೆ ತಾನು ಹಾಗೂ ಪವನ್‌ ಹಲ್ಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ವೀರಮಣಿ ಹಾಗೂ ಪವನ್‌ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಅಮೃತಹಳ್ಳಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.