ಸಾರಾಂಶ
ಬೆಂಗಳೂರು : ಡ್ರಗ್ಸ್ ಮಾಫಿಯಾ ಮೇಲೆ ಭರ್ಜರಿ ಕಾರ್ಯಾಚರಣೆ ನಡೆಸಿರುವ ಅಮೃತಹಳ್ಳಿ ಠಾಣೆ ಪೊಲೀಸರು, ವಿದೇಶಿ ಪೆಡ್ಲರ್‌ವೊಬ್ಬನನ್ನು ಬಂಧಿಸಿ ಮೂರು ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ಕೊಡಿಗೇಹಳ್ಳಿ ಸಮೀಪದ ಟಾಟಾ ನಗರದ ನಿವಾಸಿ ಪಾಪೆ ಮೊರ್ ಫಾಯೆ ಬಂಧಿತನಾಗಿದ್ದು, ಆರೋಪಿಯಿಂದ ಮೂರು ಕೆಜಿ ಎಂಡಿಎಂಎ ಕ್ರಿಸ್ಟೆಲ್ ಜಪ್ತಿ ಮಾಡಲಾಗಿದೆ. ದಾಸರಹಳ್ಳಿಯ ನಾರ್ಥ ಹೀಲ್ಸ್ ಶಾಲೆ ಹಿಂಭಾಗದ ಖಾಲಿ ಜಾಗದಲ್ಲಿ ಡ್ರಗ್ಸ್ ಮಾರಾಟಕ್ಕೆ ವಿದೇಶಿ ಪ್ರಜೆ ಯತ್ನಿಸಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಅಮೃತಹಳ್ಳಿ ಪೊಲೀಸರು ದಾಳಿ ನಡೆಸಿದ್ದಾರೆ.
2023ರಲ್ಲಿ ಭಾರತಕ್ಕೆ ಬಟ್ಟೆ ವ್ಯಾಪಾರ ಮಾಡುವ ನೆಪದಲ್ಲಿ ನೈಜೀರಿಯಾದ ಪಾಪೆ ಬಂದಿದ್ದ. ನಂತರ ತನ್ನ ವ್ಯಾಪಾರ ವಹಿವಾಟಿಗೆ ನಗರಕ್ಕೆ ಆಗಮಿಸಿದ್ದ ಆತ, ಹೆಬ್ಬಾಳದ ಟಾಟಾ ನಗರದಲ್ಲಿ ನೆಲೆ ನಿಂತ. ಆದರೆ ಬಟ್ಟೆ ವ್ಯಾಪಾರದ ಬದಲಿಗೆ ನಿರಾಯಾಸವಾಗಿ ಹಣ ಸಂಪಾದನೆಗೆ ಡ್ರಗ್ಸ್ ದಂಧೆ ಶುರು ಮಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿದೇಶದ ತನ್ನ ಪರಿಚಿತ ಪೆಡ್ಲರ್‌ಗಳಿಂದ ಕಡಿಮೆ ಬೆಲೆಗೆ ಎಂಡಿಎಂಎ ಡ್ರಗ್ಸ್ ಖರೀದಿಸಿ ಆತ, ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ. ಈತನ ದಂಧೆ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿ ಅಮೃತಹಳ್ಳಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಮೂರು ಕೋಟಿ ರು. ಮೌಲ್ಯದ ಡ್ರಗ್ಸ್ ಸಿಕ್ಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.