ಸಾರಾಂಶ
ಬೆಂಗಳೂರು : ಮಾಂಸಕ್ಕಾಗಿ ಜಿಂಕೆ ಹತ್ಯೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಬೆಂಗಳೂರು ನಗರ ಅರಣ್ಯಾಧಿಕಾರಿಗಳು, 9 ಜಿಂಕೆ ಹಾಗೂ ಮತ್ತು 1 ಕಾಡು ಹಂದಿಯ ಮಾಂಸ, ಕೃತ್ಯಕ್ಕೆ ಬಳಸುತ್ತಿದ್ದ ಎರಡು ಬಂದೂಕು, ಎರಡು ಕಾರು ಮತ್ತು ಬೈಕ್ ಜಪ್ತಿ ಮಾಡಿದ್ದಾರೆ.
ವನ್ಯಜೀವಿ ಬೇಟೆಗಾರರ ತಂಡ ಕೋಲಾರ, ಬನ್ನೇರುಘಟ್ಟ ಅರಣ್ಯದಲ್ಲಿ ಜಿಂಕೆಗಳನ್ನು ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿರುವ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮಾಹಿತಿ ಬಂದಿತ್ತು. ಸಚಿವರ ಮಾಹಿತಿ, ಸೂಚನೆ ಆಧರಿಸಿ ಕಾರ್ಯಾಚರಣೆ ಕೈಗೊಂಡ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ, ಬನ್ನೇರುಘಟ್ಟ ರಸ್ತೆಯ ನೈಸ್ ರಸ್ತೆ ಜಂಕ್ಷನ್ ಬಳಿ ಕಾರನ್ನು ತಡೆದು ತಪಾಸಣೆ ನಡೆಸಿದಾಗ, ಜಿಂಕೆ ಮತ್ತು ಕಾಡು ಹಂದಿಯ ಮೃತ ದೇಹಗಳು ಪತ್ತೆಯಾಗಿವೆ.
ಕಾರಿನಲ್ಲಿದ್ದ ಆರೋಪಿ ಪ್ರತಾಪ್ (31) ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸಿ.ಕೆ ಪಾಳ್ಯದ ಶೆಡ್‌ವೊಂದರಲ್ಲಿ ಮತ್ತಷ್ಟು ಜಿಂಕೆಗಳ ಮಾಂಸ ಇರುವ ವಿಷಯ ಬಾಯ್ಬಿಟ್ಟಿದ್ದಾನೆ. ಆರೋಪಿಯ ವಶದಿಂದ ಕೃತ್ಯಕ್ಕೆ ಬಳಸುತ್ತಿದ್ದ ಎರಡು ಬಂದೂಕುಗಳು ಹಾಗೂ 10 ಕಾರ್ಟ್ರಿಡ್ಜ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಜಿಂಕೆ ಮಾಂಸ ಸಂಗ್ರಹಿಸಿಟ್ಟಿದ್ದ ಶೆಡ್ ಮಾಲಿಕ ಭೀಮಪ್ಪ, ಬಾಲರಾಜು ಹಾಗೂ ರಮೇಶ್ ಎಂಬುವವರು ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯ ನೇತೃತ್ವವನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಣೇಶ್ ವಹಿಸಿದ್ದರು.