ಜಾಮೀನಿನ ಮೇಲೆ ಹೊರ ಬಂದಿದ್ದ ಪೋಕ್ಸೋ ಆರೋಪಿ ಕಟ್ಟಡವೊಂದರ ಮೆಟ್ಟಿಲ ಕೆಳಗೆ ಶವವಾಗಿ ಪತ್ತೆ ಆಗಿದ್ದಾನೆ. ಆಕೆ ಅಪ್ರಾಪ್ತ ಪ್ರೇಯಸಿಯ ಪೋಷಕರ ವಿರುದ್ಧ ದೂರು ನೀಡಲಾಗಿದೆ.

 ಬೆಂಗಳೂರು : ತಿಂಗಳ ಹಿಂದೆಯಷ್ಟೇ ಪೋಕ್ಸೋ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಬಂದಿದ್ದ ಯುವಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಸಂಪಂಗಿರಾಮನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸಂಪಂಗಿರಾಮನಗರದ ಸತ್ಯ(20) ಮೃತ. ಶುಕ್ರವಾರ ಬೆಳಗ್ಗೆ ಮಿಷನ್‌ ರಸ್ತೆಯ ಕಟ್ಟಡವೊಂದರ ಮೆಟ್ಟಿಲ ಕೆಳಗೆ ಸತ್ಯನ ಮೃತದೇಹ ಪತ್ತೆಯಾಗಿದೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಸಂಬಂಧ ಅಸಹಜ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಸತ್ಯ ತಮ್ಮದೇ ಏರಿಯಾದ ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದ. ಕಳೆದ ವರ್ಷ ಈ ವಿಚಾರ ಅಪ್ರಾಪ್ತೆ ಮನೆಯವರಿಗೆ ಗೊತ್ತಾಗಿ ಸತ್ಯನ ವಿರುದ್ಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಒಂದು ತಿಂಗಳ ಹಿಂದೆಯಷ್ಟೇ ಸತ್ಯ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ ಎಂದು ತಿಳಿದು ಬಂದಿದೆ.

ಕೆಲ ದಿನಗಳ ಹಿಂದೆ ಸತ್ಯ ಮತ್ತೆ ಅಪ್ರಾಪ್ತೆಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದ. ಈ ವಿಚಾರ ಅಪ್ರಾಪ್ತೆ ಮನೆಯವರಿಗೆ ಗೊತ್ತಾಗಿ ಸತ್ಯನ ಜತೆಗೆ ಜಗಳವಾಗಿತ್ತು ಎನ್ನಲಾಗಿದೆ. ಇದರ ಬೆನ್ನಲ್ಲೇ ಶುಕ್ರವಾರ ಬೆಳಗ್ಗೆ ಕಟ್ಟಡವೊಂದರ ಮೆಟ್ಟಿಲ ಕೆಳಗೆ ಸತ್ಯನ ಮೃತದೇಹ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಅಪ್ರಾಪ್ತೆ ಮನೆಯವರೇ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಸತ್ಯನ ಪೋಷಕರು ದೂರು ನೀಡಿದ್ದಾರೆ. ಈ ಸಂಬಂಧ ಸಂಪಗಿರಾಮನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.