ಸಾರಾಂಶ
ಚಾಲಕನ ನಿಯಂತ್ರಣ ತಪ್ಪಿದ ಕಾರು ವಿಶ್ವೇಶ್ವರಯ್ಯ ನಾಲೆಗೆ ಉರುಳಿ ಬಿದ್ದ ಪರಿಣಾಮ ಯುವಕನೋಬ್ಬ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಅವ್ವೇರಹಳ್ಳಿ ಬಳಿ ನಡೆದಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಚಾಲಕನ ನಿಯಂತ್ರಣ ತಪ್ಪಿದ ಕಾರು ವಿಶ್ವೇಶ್ವರಯ್ಯ ನಾಲೆಗೆ ಉರುಳಿ ಬಿದ್ದ ಪರಿಣಾಮ ಯುವಕನೋಬ್ಬ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಅವ್ವೇರಹಳ್ಳಿ ಬಳಿ ನಡೆದಿದೆ.
ಪಾಂಡವಪುರ ತಾಲೂಕಿನ ದೊಡ್ಡ ಬ್ಯಾಡರಹಳ್ಳಿ ಗ್ರಾಮದ ನಂದೀಶ್ (೧೮) ಮೃತಪಟ್ಟ ಯುವಕ. ಯೋಗಾನಂದ ಎಂಬಾತ ತೀವ್ರವಾಗಿ ಗಾಯಗೊಂಡಿದ್ದಾನೆ.
ಪಾಂಡವಪುರ ಕಡೆಯಿಂದ ಮಂಡ್ಯಕ್ಕೆ ಬರುತ್ತಿದ್ದ ಕಾರು ಅವ್ವೇರಹಳ್ಳಿ ಬಳಿಯ ವಿಶ್ವೇಶ್ವರಯ್ಯ ನಾಲೆಗೆ ಚಾಲಕ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಈ ದೃಶ್ಯ ಕಂಡ ಸ್ಥಳೀಯರು ಕಾಲುವೆಗೆ ಇಳಿದು ಕಾರಿನೊಳಗೆ ಸಿಲುಕಿದ್ದ ಯುವಕರನ್ನು ಹೊರ ತೆಗೆದಿದ್ದಾರೆ. ನಂದೀಶ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಯೋಗಾನಂದ ಅವರನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಶಿವಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಕಾರೊಂದು ಇದೇ ರೀತಿಯಲ್ಲಿ ವಿ.ಸಿ.ನಾಲೆಗೆ ಉರುಳಿ ಬಿದ್ದಿತ್ತು. ಆದರೆ, ಯಾವುದೇ ಪ್ರಾಣ ಹಾನಿಯಾಗಿರಲಿಲ್ಲ. ವಿಶ್ವೇಶ್ವರಯ್ಯ ನಾಲೆಗೆ ಹಲವಾರು ಇಂತಹ ಘಟನೆಗಳು ನಡೆದು ಅನೇಕ ಸಾವು-ನೋವುಗಳು ಸಂಭವಿಸಿವೆ. ಅಂದು ಶಾಸಕರಾಗಿದ್ದ ಸಿ.ಎಸ್.ಪುಟ್ಟರಾಜು ಅವರು ಸಹ ತಡೆಗೋಡೆ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಕೆಲವೆಡೆ ತಡೆಗೋಡೆ ನಿರ್ಮಿಸಲಾಗಿದೆ. ಉಳಿದ ಕೆಲವು ಕಡೆಗಳಲ್ಲಿ ತಡೆಗೋಡೆಗಳಿಲ್ಲ. ಇದು ಅಪಾಯದ ದಾರಿಯಾಗಿಯೇ ಪರಿಣಮಿಸಿದೆ.