45 ಪ್ರಕರಣದಲ್ಲಿ ಬೇಕಾಗಿದ್ದ ಕುಖ್ಯಾತ ರೌಡಿಯ ಬಂಧನ

| Published : Apr 24 2024, 02:19 AM IST

ಸಾರಾಂಶ

45 ಕೇಸ್‌ಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕೆ.ಆರ್‌.ಪುರ ಸಮೀಪದ ಬಸವಪುರ ನಿವಾಸಿ ಅಜೀನ್‌ನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹಳೇ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಯೊಬ್ಬನನ್ನು ಸಿಸಿಬಿ ಬಂಧಿಸಿ ಜೈಲಿಗೆ ಕಳುಹಿಸಿದೆ.

ಕೆ.ಆರ್.ಪುರ ಸಮೀಪದ ಬಸವನಪುರ ನಿವಾಸಿ ಅಜೀಜ್ ಆಸೀಫ್ ಬಂಧಿತನಾಗಿದ್ದು, ಎರಡು ದಿನಗಳ ಹಿಂದೆ ಭಾರತಿನಗರ ಸಮೀಪ ಬೈಕ್‌ನಲ್ಲಿ ತೆರಳುವಾಗ ಅಜೀಜ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವೃತ್ತಿಪರ ಕ್ರಿಮಿನಲ್‌ ಆಗಿರುವ ಅಜೀಜ್‌ ವಿರುದ್ಧ ಬೆಂಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ ಹಾಗೂ ಗೋವಾ ರಾಜ್ಯಗಳಲ್ಲಿ ಸುಮಾರು 45 ಪ್ರಕರಣಗಳು ದಾಖಲಾಗಿವೆ. 19 ಪ್ರಕರಣಗಳಲ್ಲಿ ಬೆಂಗಳೂರಿನ ವಿವಿಧ ನ್ಯಾಯಾಲಯಗಳು ಮತ್ತು 5 ಪ್ರಕರಣಗಳಲ್ಲಿ ತುಮಕೂರಿನ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದ್ದವು. ಈ ಹಿನ್ನೆಲೆಯಲ್ಲಿ ಅಜೀಜ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೈಕ್‌ಗಳನ್ನು ಕದಿಯುತ್ತಿದ್ದ ಸ್ವಿಗ್ಗಿ ಡೆಲಿವರಿ ಬಾಯ್‌ ಜೈಲುಪಾಲು

ಕನ್ನಡಪ್ರಭ ವಾರ್ತೆ ಬೆಂಗಳೂರು

ಮನೆ ಎದುರು ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್‌ ಮುರಿದು ಕಳವು ಮಾಡುತ್ತಿದ್ದ ಕಳ್ಳನನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜೆ.ಪಿ.ನಗರದ ಜರಗನಹಳ್ಳಿ ನಿವಾಸಿ ದೀಪಕ್‌ ಅಲಿಯಾಸ್‌ ದೀಪು (23) ಬಂಧಿತ. ಆರೋಪಿಯಿಂದ ₹3 ಲಕ್ಷ ಮೌಲ್ಯದ ಐದು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಜಿ.ಎಂ.ಪಾಳ್ಯದ ಮನೆ ಎದುರು ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪರಿಚಿತರಿಗೆ ಕದ್ದ ಬೈಕ್‌ ಮಾರಾಟ:

ಆರೋಪಿಯು ಸ್ವಿಗ್ಗಿ ಡೆಲಿವರಿ ಬಾಯ್‌ ಕೆಲಸ ಮಾಡಿಕೊಂಡಿದ್ದಾನೆ. ಅಪರಾಧ ಹಿನ್ನೆಲೆವುಳ್ಳ ಈತ ಡೆಲಿವರಿ ನೀಡುವ ಸಮಯದಲ್ಲಿ ಮನೆ ಎದುರು ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳನ್ನು ಗುರುತಿಸಿಕೊಂಡು ನಂತರ ಹ್ಯಾಂಡಲ್ ಲಾಕ್‌ ಮುರಿದು ಆ ದ್ವಿಚಕ್ರಗಳನ್ನು ಕಳ್ಳವು ಮಾಡುತ್ತಿದ್ದ. ಕದ್ದ ಬೈಕ್‌ಗಳನ್ನು ಅಪರಿಚಿತರಿಗೆ ದಾಖಲೆಗಳನ್ನು ಕೆಲ ದಿನಗಳಲ್ಲಿ ನೀಡುವುದಾಗಿ ಹೇಳಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ಹಣ ಖಾಲಿಯಾದಾಗ ಮತ್ತೆ ದ್ವಿಚಕ್ರ ವಾಹನ ಕಳ್ಳವು ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಈತನ ವಿರುದ್ಧ ಇವೆ 14 ಪ್ರಕರಣಈತನ ವಿರುದ್ಧ ಈ ಹಿಂದೆ ಜೆ.ಪಿ.ನಗರ, ತಿಲಕನಗರ, ಪುಟ್ಟೇನಹಳ್ಳಿ, ಕೋರಮಂಗಲ, ಬಸವನಗುಡಿ, ಬನಶಂಕರಿ ಸೇರಿದಂತೆ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದ್ವಿಚಕ್ರ ವಾಹನ ಕಳವು, ಮನೆಗಳವು ಸೇರಿದಂತೆ 14 ಪ್ರಕರಣಗಳು ದಾಖಲಾಗಿವೆ. ಕೆಲ ಪ್ರಕರಣಗಳಲ್ಲಿ ಜೈಲು ಸೇರಿದ್ದ ಆರೋಪಿಯು ಜಾಮೀನು ಪಡೆದು ಹೊರ ಬಂದ ಬಳಿಕವೂ ತನ್ನ ಕಳವು ಚಾಳಿ ಮುಂದುವರೆಸುತ್ತಿದ್ದ.

ಆರೋಪಿ ದೀಪಕ್‌ ಬಂಧನದಿಂದ ಬೈಯಪ್ಪನಹಳ್ಳಿ, ಜೆ.ಪಿ.ನಗರ, ಕೋಣನಕುಂಟೆ, ಪುಟ್ಟೇನಹಳ್ಳಿ, ಬ್ಯಾಡರಹಳ್ಳಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಐದು ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.