ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಖಾಸಗಿ ಹೋಟೆಲ್‌ನಲ್ಲಿ ಉಜ್ಬೇಕಿಸ್ತಾನ ದೇಶದ ಜರೀನಾ ಹತ್ಯೆ ಕೃತ್ಯ ಬೆಳಕಿಗೆ ಬಂದ 24 ತಾಸಿನೊಳಗೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಶೇಷಾದ್ರಿಪುರ ಠಾಣೆ ಪೊಲೀಸರು ಯಶಸ್ಸು ಕಂಡಿದ್ದಾರೆ.
ಅಸ್ಸಾಂ ರಾಜ್ಯದ ಚರೈಡಿಯೋ ಜಿಲ್ಲೆಯ ಅಮೃತ್ ಹಾಗೂ ರಾಬರ್ಟ್ ಬಂಧಿತರಾಗಿದ್ದು, ಆರೋಪಿಗಳಿಂದ 13 ಸಾವಿರ ರು. ನಗದು ಹಣ, ಉಜ್ಬೇಕಿಸ್ತಾನದ ಏಳು ಸಾವಿರ ರು. ನಗದು ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ.
ಪ್ರವಾಸಕ್ಕೆ ಬಂದು ತಮ್ಮ ಹೋಟೆಲ್‌ನಲ್ಲಿ ತಂಗಿದ್ದ ಜರೀನಾ ಅವರನ್ನು ಹಣದಾಸೆಗೆ ಅದೇ ಹೋಟೆಲ್‌ನ ಸ್ವಚ್ಛತಾ ಸಿಬ್ಬಂದಿ ಹತ್ಯೆಗೈದು ಪರಾರಿಯಾಗಿದ್ದರು.
ಈ ಬಗ್ಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಕೃತ್ಯ ಎಸಗಿ ಅಸ್ಸಾಂಗೆ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೇರಳದಲ್ಲಿ ಬಂಧಿಸಿ ಕರೆತಂದಿದ್ದಾರೆ.
ಹಣ ನೋಡಿ ಕೊಲೆ: ಅಸ್ಸಾಂ ಮೂಲದ ರಾಬರ್ಟ್ ಹಾಗೂ ಅಮೃತ್, ಕೆಲಸ ಅರಸಿಕೊಂಡು ನಗರಕ್ಕೆ ಬಂದಿದ್ದರು. ಬಿಡಿಎ ಸಮೀಪದ ಹೋಟೆಲ್‌ನ ಸ್ವಚ್ಛತಾ ವಿಭಾಗದಲ್ಲಿ ಒಂದು ತಿಂಗಳಿಂದ ಅಮೃತ್ ಹಾಗೂ 10 ದಿನಗಳಿಂದ ರಾಬರ್ಟ್ ಕೆಲಸ ಮಾಡುತ್ತಿದ್ದರು. ಅದೇ ಹೋಟೆಲ್ ಹಿಂಭಾಗದ ಕೊಠಡಿಯಲ್ಲಿ ಈ ಇಬ್ಬರು ತಂಗಿದ್ದರು.
ಎಂದಿನಂತೆ ಬುಧವಾರ ಸಹ ಆರೋಪಿಗಳು ಕೆಲಸಕ್ಕೆ ಬಂದಿದ್ದರು. ಆಗ ಜರೀನಾ ಬಳಿ ತುಂಬಾ ಹಣವಿದೆ ಎಂದು ತಿಳಿದ ಆರೋಪಿಗಳು, ಕೋಣೆ ಸ್ವಚ್ಛಗೊಳಿಸುವ ನೆಪದಲ್ಲಿ ಆಕೆ ತಂಗಿದ್ದ ಕೋಣೆಗೆ ತೆರಳಿ ಉಸಿರುಗಟ್ಟಿಸಿ ಹತ್ಯೆಗೈದು ಪರಾರಿಯಾಗಿದ್ದರು.
ಅದೇ ದಿನ ರಾತ್ರಿ ತಳಿಗೆ ಆಕೆಯ ಸ್ನೇಹಿತ ಕರೆ ಮಾಡಿದ್ದರು. ಆ ವೇಳೆ ಕರೆ ಸ್ವೀಕರಿಸದೆ ಹೋದಾಗ ಆತಂಕಗೊಂಡ ಅವರು, ಕೂಡಲೇ ಹೋಟೆಲ್ ಸಿಬ್ಬಂದಿ ಸಂಪರ್ಕಿಸಿದ್ದರು. ಕೊನೆಗೆ ಜರೀನಾ ಕೊಠಡಿಗೆ ಹೋಟೆಲ್ ಸಿಬ್ಬಂದಿ ತೆರಳಿದಾಗ ಹತ್ಯೆ ಬೆಳಕಿಗೆ ಬಂದಿತ್ತು.
ಈ ಬಗ್ಗೆ ಮಾಹಿತಿ ತಿಳಿದ ಕೇಂದ್ರ ವಿಭಾಗದ ಡಿಸಿಪಿ ಎಚ್.ಟಿ.ಶೇಖರ್ ಅವರು, ಕೂಡಲೇ ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆಗಿಳಿದರು.
ಕೃತ್ಯದಲ್ಲಿ ಹೋಟೆಲ್‌ನ ಹೌಸಿಂಗ್ ಕೀಪಿಂಗ್ ಸಿಬ್ಬಂದಿ ಕೈವಾಡ ಖಚಿತವಾದ ಕೂಡಲೇ ಆ ಸಿಬ್ಬಂದಿಯನ್ನು ಪೊಲೀಸರು ಬೆನ್ನತ್ತಿದರು. ಕೃತ್ಯ ಎಸಗಿದ ಬಳಿಕ ಮೆಜೆಸ್ಟಿಕ್‌ಗೆ ಬಂದು ಕೇರಳ ಬಸ್‌ನಲ್ಲಿ ಆರೋಪಿಗಳು ಪರಾರಿಯಾಗಿದ್ದರು. ಅಂತಿಮವಾಗಿ ಕೇರಳದಲ್ಲಿ ಆರೋಪಿಗಳನ್ನು ಬಂಧಿಸಿ ಕರೆತಂದಿದ್ದಾರೆ.
ಬಿಲ್ ಕೊಡುವಾಗ ಹಣ ಕಂಡ್ರು: ಜರೀನಾ ಕೋಣೆಗೆ ಸ್ವಚ್ಛತೆಗೆ ಮಂಗಳವಾರ ಆರೋಪಿಗಳು ಹೋಗಿದ್ದರು. ಆ ವೇಳೆ ಊಟದ ಬಿಲ್ ಪಾವತಿಸುವಾಗ ಆಕೆಯ ಪರ್ಸ್‌ನಲ್ಲಿ ತುಂಬಿದ್ದ ಹಣವು ಆರೋಪಿಗಳ ಕಣ್ಣಿಗೆ ಬಿದ್ದಿದೆ.
ಆಗ ಜರೀನಾ ಬಳಿ ತುಂಬಾ ಹಣವಿದೆ ಎಂದು ದುರಾಸೆಯಿಂದ ಅಮೃತ್ ಹಾಗೂ ರಾಬರ್ಟ್ ಹತ್ಯೆಗೆ ನಿರ್ಧರಿಸಿದ್ದರು. ಅಂತೆಯೇ ಬುಧವಾರ ಮಧ್ಯಾಹ್ನ ಸಿಂಕ್ ಸ್ವಚ್ಛಗೊಳಿಸುವ ನೆಪದಲ್ಲಿ ಜರೀನಾ ಕೋಣೆಗೆ ತೆರಳಿದ್ದರು. ಆಗ ಆಕೆಯನ್ನು ಉಸಿರುಗಟ್ಟಿಸಿ ಹತ್ಯೆಗೈದು ಪರಾರಿಯಾಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.