ಸಾರಾಂಶ
ಪ್ರಕರಣವೊಂದರ ಸಂಬಂಧ ದಾಖಲೆ ಪಡೆದುಕೊಳ್ಳಲು ನ್ಯಾಯಾಲಯಕ್ಕೆ ಬಂದಿದ್ದ ಮೂಕ ಕಕ್ಷಿದಾರನೊಬ್ಬ ವಕೀಲೆ ಮೇಲೆ ಹಲ್ಲೆ ನಡೆಸಿ ಅಸಭ್ಯವಾಗಿ ವರ್ತಿಸಿದ ಘಟನೆ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ಜರುಗಿದೆ. ಘಟನೆ ಸಂಬಂಧ ವಕೀಲೆ ಯಶೋಧಮ್ಮ ಪೊಲೀಸರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಆರೋಪಿ ಉಮೇಶ್ ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮದ್ದೂರು
ಪ್ರಕರಣವೊಂದರ ಸಂಬಂಧ ದಾಖಲೆ ಪಡೆದುಕೊಳ್ಳಲು ನ್ಯಾಯಾಲಯಕ್ಕೆ ಬಂದಿದ್ದ ಮೂಕ ಕಕ್ಷಿದಾರನೊಬ್ಬ ವಕೀಲೆ ಮೇಲೆ ಹಲ್ಲೆ ನಡೆಸಿ ಅಸಭ್ಯವಾಗಿ ವರ್ತಿಸಿದ ಘಟನೆ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ಜರುಗಿದೆ.ಘಟನೆ ಕಂಡು ರೊಚ್ಚಿಗೆದ್ದ ಸಹೋದ್ಯೋಗಿ ವಕೀಲರು ಹಾಗೂ ಸಾರ್ವಜನಿಕರು ಕಕ್ಷಿದಾರನಿಗೆ ಧರ್ಮದೇಟು ನೀಡಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಇದರಿಂದ ನ್ಯಾಯಾಲಯದ ಆವರಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಹಲ್ಲೆಯಿಂದ ವಕೀಲರ ಸಂಘದ ಮಾಜಿ ಅಧ್ಯಕ್ಷ ಜಿ.ಎನ್.ಸತ್ಯ ಅವರ ಸಹಾಯಕಿ, ವಕೀಲರಾದ ಎಂ.ಬಿ.ಯಶೋದಮ್ಮ ಗಾಯಗೊಂಡಿದ್ದಾರೆ. ಘಟನೆ ಸಂಬಂಧ ತಾಲೂಕಿನ ಮಹರ್ನವಮಿ ದೊಡ್ಡಿ ಗ್ರಾಮದ ಎಂ.ಆರ್. ಉಮೇಶ್ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.ಮಂಡ್ಯದ ವಕೀಲ ಬೋರೇಗೌಡರ ಬಳಿ ಕಕ್ಷಿದಾರ ಉಮೇಶ್ ತಮ್ಮ ಜಮೀನಿನ ಸಂಬಂಧ ಕೇಸು ದಾಖಲಿಸಿದ್ದರು. ವಕೀಲ ಬೊರೇಗೌಡರು ಕೇಸಿನ ಸಂಬಂಧ ನ್ಯಾಯಾಲಯದಿಂದ ದಾಖಲೆ ಪಡೆದು ಉಮೇಶ್ ಅವರಿಗೆ ನೀಡುವಂತೆ ವಕೀಲರಾದ ಯಶೋದಮ್ಮ ಅವರಿಗೆ ತಿಳಿಸಿದರು.
ದಾಖಲೆ ಪಡೆದುಕೊಳ್ಳಲು ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ನ್ಯಾಯಾಲಯಕ್ಕೆ ಬಂದಿದ್ದ ಉಮೇಶ್ ನ್ಯಾಯಾಲಯದ ಆವರಣದಲ್ಲಿಯೇ ಏಕಾಏಕಿ ವಕೀಲ ಯಶೋದಮ್ಮ ಅವರ ತಲೆಗೆ ಕೈಯಿಂದ ಹೊಡೆದು ಅಸಭ್ಯವಾಗಿ ವರ್ತಿಸಿದ್ದಾನೆ.ಈತನ ವರ್ತನೆಯಿಂದ ಭೀತಿಗೊಂಡ ಯಶೋಧಮ್ಮ ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ನಂತರ ಸ್ಥಳದಲ್ಲಿದ್ದ ಸಹದ್ಯೋಗಿ ವಕೀಲರಾದ ಮನು, ದಿವ್ಯಾನಂದ ಹಾಗೂ ಸಾರ್ವಜನಿಕರು ಉಮೇಶ್ ಮೇಲೆ ಮರು ಹಲ್ಲೆ ನಡೆಸಿ ದ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ವಕೀಲೆ ಯಶೋಧಮ್ಮ ಪೊಲೀಸರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಆರೋಪಿ ಉಮೇಶ್ ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.