ಅನಧಿಕೃತ ಕಾಲ್ ಸೆಂಟರ್‌ವೊಂದರ ಮೇಲೆ ದಾಳಿ : ಹಣ ದೋಚುತ್ತಿದ್ದ ಇಬ್ಬರು ವಂಚಕರು ಪೊಲೀಸ್‌ ವಶಕ್ಕೆ

| Published : Jan 04 2025, 01:30 AM IST / Updated: Jan 04 2025, 04:36 AM IST

KSRP

ಸಾರಾಂಶ

ಅನಧಿಕೃತ ಕಾಲ್ ಸೆಂಟರ್‌ವೊಂದರ ಮೇಲೆ ದಾಳಿ ನಡೆಸಿದ ಆಗ್ನೇಯ ವಿಭಾಗದ ಪೊಲೀಸರು ಆನ್‌ಲೈನ್‌ ಟ್ರೇಡಿಂಗ್‌ ಹೆಸರಿನಲ್ಲಿ ಜನರಿಗೆ ಮಂಕೂಬೂದಿ ಎರಚಿ ಹಣ ದೋಚುತ್ತಿದ್ದ ಸೈಬರ್ ವಂಚಕರ ಜಾಲವನ್ನು ಶುಕ್ರವಾರ ಭೇದಿಸಿದ್ದಾರೆ.

  ಬೆಂಗಳೂರು : ಅನಧಿಕೃತ ಕಾಲ್ ಸೆಂಟರ್‌ವೊಂದರ ಮೇಲೆ ದಾಳಿ ನಡೆಸಿದ ಆಗ್ನೇಯ ವಿಭಾಗದ ಪೊಲೀಸರು ಆನ್‌ಲೈನ್‌ ಟ್ರೇಡಿಂಗ್‌ ಹೆಸರಿನಲ್ಲಿ ಜನರಿಗೆ ಮಂಕೂಬೂದಿ ಎರಚಿ ಹಣ ದೋಚುತ್ತಿದ್ದ ಸೈಬರ್ ವಂಚಕರ ಜಾಲವನ್ನು ಶುಕ್ರವಾರ ಭೇದಿಸಿದ್ದಾರೆ. ಬಿಹಾರದ ಜಿತೇಂದ್ರ ಕುಮಾರ್ ಹಾಗೂ ಆತನ ಪಾಲುದಾರ ಚಂದನ್‌ ಕುಮಾರ್ ಬಂಧಿತರಾಗಿದ್ದು, 5 ಲ್ಯಾಪ್‌ಟಾಪ್‌, 5 ಕಂಪ್ಯೂಟರ್‌, 10 ಬೇಸಿಕ್‌ ಮೊಬೈಲ್‌ ಹಾಗೂ 20ಕ್ಕೂ ಹೆಚ್ಚಿನ ಆನ್‌ಡ್ರೈಡ್‌ ಮೊಬೈಲ್‌ ಸೇರಿ ಕೆಲ ದಾಖಲೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಹುಳಿಮಾವು ಸಮೀಪ ಷೇರು ಹೂಡಿಕೆ ಬಗ್ಗೆ ಸಲಹೆ ನೀಡುವ ನೆಪದಲ್ಲಿ ಅನಧಿಕೃತ ಕಾಲ್ ಸೆಂಟರ್ ಹಾಗೂ ಬಿಪಿಓ ಕಂಪನಿ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಡಿಸಿಪಿ ಸಾರಾ ಫಾತಿಮಾ ನೇತೃತ್ವದ ಪೊಲೀಸರ ತಂಡವು ಹಠಾತ್ ದಾಳಿ ನಡೆಸಿದೆ. ಆ ನಕಲಿ ಕಂಪನಿ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆಗೊಳಿಸಿದಾಗ ಸೈಬರ್ ಮೋಸ ಜಾಲ ಬಯಲಾಗಿದೆ.

ಠಾಣೆ ಸನಿಹದಲ್ಲೇ ವಂಚಕರ ಅಡ್ಡೆ:

ಬಿಹಾರ ಮೂಲದ ಜಿತೇಂದ್ರ ಬಿಎಸ್ಸಿ ಪದವೀಧರನಾಗಿದ್ದು, ಕಳೆದೊಂದು ವರ್ಷದಿಂದ ಹುಳಿಮಾವು ಪೊಲೀಸ್ ಠಾಣೆ ಸಮೀಪದಲ್ಲೇ ಕಾಲ್ ಸೆಂಟರ್ ಹಾಗೂ ಬಿಪಿಓ ಕಂಪನಿ ನಡೆಸುತ್ತಿದ್ದ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಸಲಹೆ ನೀಡುವ ನೆಪದಲ್ಲಿ ಜನರಿಗೆ ವಂಚಿಸಿ ಹಣ ದೋಚುತ್ತಿದ್ದ. ಇದಕ್ಕೆ ಆತನ ಸ್ನೇಹಿತ ಚಂದನ್ ಸಾಥ್ ಕೊಟ್ಟಿದ್ದ. ಹುಳಿಮಾವಿನಲ್ಲಿ ಕಟ್ಟಡದ ಮಾಲಿಕರ ಜತೆ ಯಾವುದೇ ಒಡಂಬಡಿಕೆ ಮಾಡಿಕೊಳ್ಳದೆ ಹಾಗೂ ಸರ್ಕಾರಿ ಇಲಾಖೆಯಲ್ಲಿ ನೊಂದಾಯಿಸದೆ ಅನಧಿಕೃತವಾಗಿ ಸೆಂಟರ್ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಯಿತು. ಇಲ್ಲಿ 7 ಹುಡುಗಿಯರು ಹಾಗೂ 8 ಹುಡುಗರು ಕೆಲಸ ಮಾಡುತ್ತಿದ್ದು, ಇವರ ಮೂಲಕ ಗ್ರಾಹಕರಿಗೆ ಕರೆ ಮಾಡಿಸಿ ವಂಚನೆ ಮಾಡುತ್ತಿದ್ದರು. ಈ ಕೃತ್ಯಕ್ಕಾಗಿ ಕೆಲವರಿಂದ ಗ್ರಾಹಕರ ದತ್ತಾಂಶ (ಡಾಟಾ) ಜಿತೇಂದ್ರ ಖರೀದಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೇರೆ ಬೇರೆ ಹೆಸರಿನಲ್ಲಿ ಕರೆ: ಈ ಕಾಲ್‌ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗ-ಹುಡುಗಿಯರ ಪೈಕಿ ಬಹುತೇಕರು ಬಿಎಂ ಹಾಗೂ ಪಿಯುಸಿ ಓದಿದ್ದಾರೆ. ಆದರೆ ಕಾಮರ್ಸ್‌ಗೆ ಸಂಬಂಧಿಸಿದ ಬಗ್ಗೆ ಮಾಹಿತಿ ನೀಡುವ ಸಲಹೆಗಾರರಾಗಿದ್ದರು. ಇನ್ನು ಜನರಿಗೆ ಬೇರೆ ಬೇರೆ ಹೆಸರಿನಲ್ಲಿ ಕರೆ ಮಾಡಿ ತಮ್ಮ ಮೋಸದ ಬಲೆಗೆ ಬೀಳಿಸಿಕೊಳ್ಳುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಷೇರು ಟ್ರೇಡಿಂಗ್ ಹೂಡಿಕೆ ನೆಪದಲ್ಲಿ ಜನರಿಂದ ಎಷ್ಟು ಮೊತ್ತದ ಹಣವನ್ನು ವಸೂಲಿ ಮಾಡಿ ಆರೋಪಿ ಜಿತೇಂದ್ರ ವಂಚಿಸಿದ್ದಾನೆ ಎಂಬ ಬಗ್ಗೆ ತನಿಖೆ ನಡೆದಿದೆ. ದಾಳಿ ವೇಳೆ ಪತ್ತೆಯಾದ ಮೊಬೈಲ್‌, ಕಂಪ್ಯೂಟರ್‌ಗಳು ಹಾಗೂ ಲ್ಯಾಪ್‌ಟಾಪ್‌ ಗಳನ್ನು ಪರಿಶೀಲಿಸಲಾಗುತ್ತಿದ್ದು, ಅಸಂಖ್ಯಾತ ಮೊಬೈಲ್ ಗಳಿಗೆ ಕರೆ ಮಾಡಿರುವುದು ಪ್ರಾಥಮಿಕ ಹಂತದಲ್ಲಿ ಗೊತ್ತಾಗಿದೆ.

- ಸಾರಾ ಫಾತಿಮಾ ಡಿಸಿಪಿ, ಆಗ್ನೇಯ ವಿಭಾಗ