ಬೆಂಗಳೂರು: ಚಾಕು ಇರಿದುಕೊಂಡು ಭಗ್ನಪ್ರೇಮಿ ಆತ್ಮಹತ್ಯೆ

| Published : Mar 09 2024, 01:34 AM IST / Updated: Mar 09 2024, 09:28 AM IST

ಬೆಂಗಳೂರು: ಚಾಕು ಇರಿದುಕೊಂಡು ಭಗ್ನಪ್ರೇಮಿ ಆತ್ಮಹತ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಮದುವೆ ಒಪ್ಪದ ಪ್ರಿಯತಮೆಯ ಮನೆ ಮುಂದೆಯೇ ಯುವಕ ಚಾಕು ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿ ತನ್ನ ಮಾಜಿ ಪ್ರಿಯತಮೆ ಮನೆ ಮುಂದೆ ಹೊಟ್ಟೆಗೆ ಚಾಕು ಚುಚ್ಚಿಕೊಂಡು ಆತ್ಮಹತ್ಯೆ ಯತ್ನಿಸಿದ್ದ ಆಟೋ ಚಾಲಕನೊಬ್ಬ ಚಿಕಿತ್ಸೆ ಫಲಿಸದೆ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾನೆ.

ಮಾಗಡಿ ರಸ್ತೆಯ ತುಂಗಾ ನಗರದ ಚೇತನ್ (21) ಮೃತ ದುರ್ದೈವಿ. ನಂದಿನಿ ಲೇಔಟ್‌ ಸಮೀಪ ತನ್ನ ಪ್ರಿಯತಮೆ ಮನೆಗೆ ಬಳಿ ಗುರುವಾರ ರಾತ್ರಿ ಚೇತನ್ ಆತ್ಮಹತ್ಯೆ ಯತ್ನಿಸಿದ್ದ. ಬಳಿಕ ನಾಗರಬಾವಿ ಸಮೀಪ ಖಾಸಗಿ ಆಸ್ಪತ್ರೆಗೆ ಆತನನ್ನು ಮೃತನ ಕುಟುಂಬದವರು ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಶುಕ್ರವಾರ ಚೇತನ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಮೂರ್ನಾಲ್ಕು ವರ್ಷಗಳಿಂದ ನಂದಿನಿ ಲೇಔಟ್‌ನಲ್ಲಿ ನೆಲೆಸಿರುವ ಯುವತಿಯನ್ನು ಚೇತನ್ ಪ್ರೀತಿಸುತ್ತಿದ್ದ. ಆದರೆ ಇತ್ತೀಚಿಗೆ ಪ್ರಿಯಕರನಿಂದ ದೂರವಾಗಲು ಆಕೆ ಯತ್ನಿಸಿದ್ದಳು. 

ಇದರಿಂದ ಬೇಸರಗೊಂಡಿದ್ದ ಚೇತನ್‌, ಪ್ರಿಯತಮೆ ಮನೆಗೆ ಗುರುವಾರ ರಾತ್ರಿ ತನ್ನ ಪೋಷಕರನ್ನು ಕರೆದುಕೊಂಡು ಹೋಗಿ ಮದುವೆ ಪ್ರಸ್ತಾಪ ಮಾಡಿದ್ದಾನೆ. ಆಗ ಆಕೆಯ ಪೋಷಕರು ವಿರೋಧಿಸಿದ್ದಾರೆ. 

ಕೊನೆಗೆ ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಬೇಸರಗೊಂಡ ಚೇತನ್‌, ತನ್ನ ಹೊಟ್ಟೆಗೆ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಯತ್ನಿಸಿದ್ದಾನೆ. ಆ ವೇಳೆ ಆತನನ್ನು ರಕ್ಷಿಸಿ ಮನೆಗೆ ಚೇತನ್ ಪೋಷಕರು ಕರೆದುಕೊಂಡು ಹೋಗಿದ್ದಾರೆ.

ಮನೆಗೆ ಮರಳಿದ ಕೆಲ ಹೊತ್ತಿನಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡು ಆತ ಒದ್ದಾಡಿದ್ದಾನೆ. ತಕ್ಷಣವೇ ನಾಗರಬಾವಿ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚೇತನ್‌ನನ್ನು ಆತನ ಪೋಷಕರು ದಾಖಲಿಸಿದ್ದಾರೆ. 

ಆದರೆ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ. ಈಗ ಮೃತನ ಸ್ನೇಹಿತೆ ಹಾಗೂ ಆಕೆಯ ಕುಟುಂಬದವರ ಮೇಲೆ ಮೃತನ ಪೋಷಕರು ಕೊಲೆ ಆರೋಪ ಮಾಡಿದ್ದಾರೆ. ಈ ಸಂಬಂಧ ಶಂಕಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ನಂದಿನಿ ಲೇಔಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.