ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಕಾರಿನೊಳಗೆ ಮಾರಕಾಸ್ತ್ರದಿಂದ ಇರಿದು ಕೊಲೆ ಮಾಡಿರುವ ಘಟನೆ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಯಲಹಂಕದ ಮಾರುತಿನಗರದ ಕೃಷ್ಣ ಯಾದವ್ (55) ಕೊಲೆಯಾದ ವ್ಯಕ್ತಿ. ಸೋಮವಾರ ಸಂಜೆ 6.30ರ ಸುಮಾರಿಗೆ ಮನೆಯಿಂದ ಕಾರಿನಲ್ಲಿ ಹೊರಗೆ ಹೋಗಿದ್ದರು. ಮಂಗಳವಾರ ಮುಂಜಾನೆ ಬಾಗಲೂರು ಕ್ರಾಸ್ ಬಳಿಯ ಬಸ್ ನಿಲ್ದಾಣದ ಬಳಿ ಕಾರಿನೊಳಗೆ ಕೃಷ್ಣ ಯಾದವ್ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಮೃತನ ಪುತ್ರ ಹರೀಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಕೃಷ್ಣಯಾದವ್ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದು, ಹಲವು ವರ್ಷಗಳಿಂದ ಕುಟುಂಬದ ಜತೆಗೆ ಯಲಹಂಕದ ಮಾರುತಿನಗರದಲ್ಲಿ ನೆಲೆಸಿದ್ದರು. ಸೋಮವಾರ ಸಂಜೆ 6.30ರ ಸುಮಾರಿಗೆ ಸ್ನೇಹಿತರ ಜತೆಗೆ ಹೊರಗೆ ಹೋಗಿ ಬರುವುದಾಗಿ ಮನೆಯವರಿಗೆ ತಿಳಿಸಿ ತಮ್ಮ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಮನೆಯಿಂದ ಹೊರಟಿದ್ದರು. ರಾತ್ರಿ 9.30ರ ಸುಮಾರಿಗೆ ಮನೆಗೆ ಕರೆ ಮಾಡಿ ಊಟಕ್ಕೆ ಬರುವುದಾಗಿ ಹೇಳಿದ್ದರು. ಆದರೆ, ರಾತ್ರಿ 10 ಗಂಟೆ ಕಳೆದರೂ ಮನೆಗೆ ಬಂದಿಲ್ಲ. ಈ ವೇಳೆ ಮನೆಯವರು ಕರೆ ಮಾಡಿದಾಗ ಮೊಬೈಲ್ ಸ್ವಿಚ್ಡ್ ಆಫ್ ಬಂದಿದೆ.ಮಂಗಳವಾರ ಬೆಳಗ್ಗೆ ಬಾಗಲೂರು ಕ್ರಾಸ್‌ನ ಬಸ್ ನಿಲ್ದಾಣದ ಬಳಿ ಬಿಳಿ ಬಣ್ಣದ ಕಾರೊಂದು ಅನುಮಾನಾಸ್ಪದವಾಗಿ ನಿಂತಿರುವುದು ಕಂಡು ಬಂದಿದೆ. ಸ್ಥಳೀಯರು ಹತ್ತಿರ ಹೋಗಿ ನೋಡಿದಾಗ ಕಾರಿನೊಳಗೆ ರಕ್ತಸಿಕ್ತ ಮೃತದೇಹ ಇರುವುದು ಕಂಡು ಬಂದಿದೆ. ಈ ಸಂಬಂಧ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಯಲಹಂಕ ಪೊಲೀಸರು ಸ್ಥಳಕ್ಕೆ ಬಂದು ಕಾರು ಹಾಗೂ ಮೃತದೇಹವನ್ನು ಪರಿಶೀಲಿಸಿದ್ದಾರೆ.ಪುತ್ರನಿಂದ ಹುಡುಕಾಟ
ಪುತ್ರ ಹರೀಶ್ ರಾತ್ರಿ ತಂದೆ ಮನೆಗೆ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡು ಹುಡುಕಾಡಲು ಮುಂದಾಗಿದ್ದಾರೆ. ದೊಡ್ಡಜಾಲದ ಬಳಿ ಕೃಷ್ಣ ಯಾದವ್ ಉಳಿದುಕೊಳ್ಳುತ್ತಿದ್ದ ರೂಮ್ ಬಳಿ ತೆರಳಿ ಪರಿಶೀಲಿಸಿದಾಗ ತಂದೆ ಇರಲಿಲ್ಲ. ಹೀಗಾಗಿ ಮನೆ ಕಡೆಗೆ ವಾಪಾಸ್ ಬರುವಾಗ ಬಾಗಲೂರು ಕ್ರಾಸ್‌ನ ಬಸ್ ನಿಲ್ದಾಣದ ಬಳಿ ಜನ ಜಮಾಯಿಸಿರುವುದನ್ನು ಹರೀಶ್ ಗಮನಿಸಿದ್ದಾರೆ. ಬಳಿಕ ಅಲ್ಲಿಗೆ ತೆರಳಿ ನೋಡಿದಾಗ ಕಾರಿನೊಳಗೆ ತಂದೆ ಮೃತದೇಹ ಪತ್ತೆಯಾಗಿದೆ. ಬಳಿಕ ಪೊಲೀಸರು ಹರೀಶ್‌ನಿಂದ ಮಾಹಿತಿ ಪಡೆದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳ ಹಾಗೂ ಸುತ್ತಮುತ್ತಲ ಸ್ಥಳಗಳ ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿ ಪರಿಶೀಲಿಸಿರುವ ಪೊಲೀಸರು, ದುಷ್ಕರ್ಮಿಗಳ ಪತ್ತೆಗೆ ಶೋಧ ಕಾರ್ಯ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಎದೆ, ಕುತ್ತಿಗೆ ಭಾಗಕ್ಕೆ ಇರಿದು ಕೊಲೆಕೊಲೆಯಾದ ಕೃಷ್ಣ ಯಾದವ್ ಬಾಗಲೂರು ಕ್ರಾಸ್ ಬಳಿ ರಿಯಲ್ ಎಸ್ಟೇಟ್ ಕಚೇರಿ ಹೊಂದಿದ್ದಾರೆ. ಸೋಮವಾರ ರಾತ್ರಿ 11.30ರ ಸುಮಾರಿಗೆ ಕೃಷ್ಣ ಯಾದವ್ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿರುವುದನ್ನು ಪರಿಚಿತರು ನೋಡಿದ್ದಾರೆ. ಸೋಮವಾರ ತಡರಾತ್ರಿ 12.30ರಿಂದ 1.30ರ ಸುಮಾರಿಗೆ ದುಷ್ಕರ್ಮಿಗಳು ಚೂಪಾದ ಆಯುಧದಿಂದ ಕೃಷ್ಣ ಯಾದವ್ ಅವರ ಎದೆ, ಕುತ್ತಿಗೆಗೆ ಇರಿದು ಕಾರಿನೊಳಗೆ ಕೊಲೆ ಮಾಡಿದ್ದಾರೆ. ಬಳಿಕ ಕಾರನ್ನು ಬಾಗಲೂರು ಕ್ರಾಸ್ ಬಳಿ ತಂದು ನಿಲ್ಲಿಸಿ ಪರಾರಿಯಾಗಿದ್ದಾರೆ.ಕಾರಿನ ಬಳಿ ದುಪ್ಪಟ್ಟ ಪತ್ತೆ
ರಿಯಲ್ ಎಸ್ಟೇಟ್ ಉದ್ಯಮಿ ಕೃಷ್ಣ ಯಾದವ್ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ರಿಯಲ್ ಎಸ್ಟೇಟ್ ವ್ಯವಹಾರ ಅಥವಾ ಹಣಕಾಸು ವ್ಯವಹಾರ ಸಂಬಂಧ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕಾರಿನ ಬಳಿ ದುಪಟ್ಟವೊಂದು ಕಂಡು ಬಂದಿದೆ. ಮಹಿಳೆಯ ವಿಚಾರಕ್ಕೆ ಗಲಾಟೆಯಾಗಿ ಕೊಲೆಯಾಗಿರುವ ಬಗ್ಗೆಯೂ ಅನುಮಾನ ಮೂಡಿದೆ. ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.