ನಗರದಲ್ಲಿ ಗಾಂಜಾ ಮಾರಾಟಕ್ಕಿಳಿದಿದ್ದ ಮಹಿಳೆಯೊಬ್ಬಳನ್ನು ದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಗಾಂಜಾ ಮಾರಾಟಕ್ಕಿಳಿದಿದ್ದ ಮಹಿಳೆಯೊಬ್ಬಳನ್ನು ದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪೂಜನಹಳ್ಳಿ ನಿವಾಸಿ ಮಮತಾ ದೇವಿ ಬಂಧಿತಳಾಗಿದ್ದು, ಆರೋಪಿಯಿಂದ ಒಂದು ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. ಎರಡು ದಿನಗಳ ಹಿಂದೆ ದೇವನಹಳ್ಳಿ ಸಮೀಪ ಗಾಂಜಾ ಮಾರಾಟಕ್ಕೆ ಆಕೆ ಯತ್ನಿಸಿದ್ದಾಗ ಖಚಿತ ಮಾಹಿತಿ ಪಡೆದು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಮತಾ ದೇವಿ ಮೂಲತಃ ಬಿಹಾರ ರಾಜ್ಯದವಳಾಗಿದ್ದು, ದೇವನಹಳ್ಳಿ ಹತ್ತಿರ ಅಪಾರ್ಟ್‌ಮೆಂಟ್‌ನಲ್ಲಿ ಸ್ವಚ್ಛತಾ ವಿಭಾಗದಲ್ಲಿ ಆಕೆ ಕೆಲಸ ಮಾಡುತ್ತಿದ್ದಳು. ಹಣದಾಸೆಗೆ ಬಿದ್ದು ಗಾಂಜಾ ಮಾರಾಟ ದಂಧೆಯಲ್ಲಿ ಮಮತಾ ತೊಡಗಿದ್ದಳು. ತನ್ನೂರಿನಿಂದ ಕಡಿಮೆ ಬೆಲೆಗೆ ಗಾಂಜಾ ತಂದು ನಗರದಲ್ಲಿ ಹೆಚ್ಚಿನ ಬೆಲೆಗೆ ಆಕೆ ಬಿಕರಿ ಮಾಡುತ್ತಿದ್ದಳು. ಕಳೆದ ಎರಡು ತಿಂಗಳಿಂದ ಆಕೆ ವ್ಯವಹಾರ ನಡೆಸಿದ್ದಳು ಎಂಬ ಮಾಹಿತಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ

-ಬಾಕ್ಸ್‌-

2.40 ಕೋಟಿ ಗಾಂಜಾ ಜಪ್ತಿ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೆ 2.40 ಕೋಟಿ ರು. ಮೌಲ್ಯದ ಹೈಡ್ರೋ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಕೆಐಎಗೆ ಬ್ಯಾಂಕಾಕ್‌ನಿಂದ ಬಂದಿಳಿದ ಇಬ್ಬರು ಪ್ರಯಾಣಿಕರನ್ನು ಪ್ರತ್ಯೇಕವಾಗಿ ಬಂಧಿಸಿದ ಕಸ್ಟಮ್ಸ್ ಅಧಿಕಾರಿಗಳು, ಈ ಆರೋಪಿಗಳಿಂದ 2.40 ಕೋಟಿ ರು ಮೌಲ್ಯದ 6 ಕೆಜಿ ಹೈಡ್ರೋ ಗಾಂಜಾ ಜಪ್ತಿ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.