ಸಾರಾಂಶ
ವೇಗವಾಗಿ ಬಂದ ದ್ವಿಚಕ್ರ ವಾಹನ ಸವಾರ ಮುಂದೆ ಹೋಗುತ್ತಿದ್ದ ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಯಲಹಂಕ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ವೇಗವಾಗಿ ಬಂದ ದ್ವಿಚಕ್ರ ವಾಹನ ಸವಾರ ಮುಂದೆ ಹೋಗುತ್ತಿದ್ದ ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಯಲಹಂಕ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಇಸ್ರೋ ಲೇಔಟ್ ನಿವಾಸಿ ಸಂದೀಪ್ ದೇವನಾಥ್(25) ಮೃತ ಸವಾರ. ದೊಡ್ಡಬಳ್ಳಾಪುರ ಮುಖ್ಯರಸ್ತೆಯ ಶೆಲ್ ಪೆಟ್ರೋಲ್ ಬಂಕ್ ಬಳಿ ಮಂಗಳವಾರ ತಡರಾತ್ರಿ ಈ ಅಪಘಾತ ಸಂಭವಿಸಿದೆ.
ತ್ರಿಪುರ ಮೂಲದ ಸಂದೀಪ್ ದೇವನಾಥ್ ಇಸ್ರೋ ಲೇಔಟ್‌ನಲ್ಲಿ ಖಾಸಗಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಮಂಗಳವಾರ ರಾತ್ರಿ ಸ್ನೇಹಿತನನ್ನು ಭೇಟಿಯಾಗಿ ದೊಡ್ಡಬಳ್ಳಾಪುರ ಮುಖ್ಯರಸ್ತೆಯಲ್ಲಿ ಬರುತ್ತಿದ್ದ. ಈ ವೇಳೆ ವೇಗವಾಗಿ ದ್ವಿಚಕ್ರ ವಾಹನ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಬೊಲೆರೋ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಸಂದೀಪ್‌ನನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಹೆಲ್ಮೆಟ್ ಧರಿಸದ ಪರಿಣಾಮ ತಲೆಗೆ ಗಂಭೀರ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿ ಚಿಕಿತ್ಸೆ ಫಲಿಸದೆ ಬುಧವಾರ ಮುಂಜಾನೆ ಮೃತಪಟ್ಟಿದ್ದಾನೆ.ದ್ವಿಚಕ್ರ ವಾಹನದ ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ತ್ರಿಪುರದಲ್ಲಿರುವ ಮೃತ ಸವಾರ ಸಂದೀಪ್ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಅವರು ನಗರಕ್ಕೆ ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.