ಸಾರಾಂಶ
ಮಹಿಳೆಯೊಬ್ಬಳು ಬಾಡಿಗೆಗೆ ಕಾರು ಬೇಕೆಂದು ಹೇಳಿ, ಕಾರು ಸಹಿತ ಚಾಲಕನ ದುಬಾರಿ ಮೊಬೈಲ್ ಕಳವು ಮಾಡಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪೀಣ್ಯ ದಾಸರಹಳ್ಳಿ: ಮಹಿಳೆಯೊಬ್ಬಳು ಬಾಡಿಗೆಗೆ ಕಾರು ಬೇಕೆಂದು ಹೇಳಿ, ಕಾರು ಸಹಿತ ಚಾಲಕನ ದುಬಾರಿ ಮೊಬೈಲ್ ಕಳವು ಮಾಡಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಯವಂಚಕಿ ಮಹಿಳೆಯಿಂದ ಕಾರು ಹಾಗೂ ದುಬಾರಿ ಮೊಬೈಲ್ ಕಳೆದುಕೊಂಡ ಕಾರು ಚಾಲಕ ಅನಂತಕುಮಾರ್ ನಾಗಸಂದ್ರದ ನಿವಾಸಿ. ಪ್ರಕರಣದಲ್ಲಿ ವಂಚಿಸಿರುವ ಮಹಿಳೆ ಮೇನಕಾ ಎಂಬ ಹೆಸರಿನಲ್ಲಿ ಪರಿಚಯವಾಗಿ, 15 ದಿನಗಳ ಹಿಂದೆ ಕಾರವಾರ ಟ್ರಿಪ್‌ನಲ್ಲಿ ಚಾಲಕನಿಗೆ ಭೇಟಿಯಾಗಿ ಸ್ನೇಹ ಬೆಳೆಸಿದ್ದಳು. ಬೆಂಗಳೂರು ಹಾಗೂ ಮೈಸೂರು ನೋಡಲು ಬಾಡಿಗೆಗೆ ಕಾರು ಬೇಕೆಂದು ಹೇಳಿ ಮೇನಕಾ, ಚಾಲಕ ಅನಂತಕುಮಾರ್ ನಂಬಿಕೆ ಗೆದ್ದು ಲಾಡ್ಜ್‌ನಲ್ಲಿ ರೂಮ್ ಬುಕ್ ಮಾಡಿಸಿಕೊಂಡಿದ್ದಳು.
ಭಾನುವಾರ 8ನೇ ಮೈಲಿ ಸಿಗ್ನಲ್ ಬಳಿ ಚಾಲಕರಿಗೆ ಕರೆ ಮಾಡಿದ ಮೇನಕಾ, ತಾತ್ಕಾಲಿಕವಾಗಿ ಪ್ರೆಶಫ್ ಆಗಲು ಹೇಳಿ ಹೆಸರಘಟ್ಟ ಮುಖ್ಯ ರಸ್ತೆಯ ಸಿಡೇದಳ್ಳಿ ಪಿ.ವಿ. ರೆಸಿಡೆನ್ಸಿಯಲ್ಲಿ ರೂಮ್ ಬುಕ್ ಮಾಡಿಸಿದ್ದಳು. ಬಳಿಕ ಚಾಲಕ ಬಾತ್‌ರೂಮಿಗೆ ಹೋಗುತ್ತಿದ್ದಂತೆ ಬಾಗಿಲು ಲಾಕ್ ಮಾಡಿ, ಬೇರೊಬ್ಬರನ್ನ ಕರೆಸಿ ( ಕೆಎ-04-ಎಬಿ-0257) ನಂಬರ್‌ನ ಹುಂಡೈ ಎಕ್ಸೆಂಟ್, ಚಾಲಕನ ಕಾರು ಹಾಗೂ ಮೊಬೈಲ್ ಜತೆಗೆ ಪರಾರಿಯಾಗಿದ್ದಾಳೆ. ಚಾಲಕ ಲಾಡ್ಜ್ ರೂಮ್ ಬಾಯ್ ಸಹಾಯದಿಂದ ಹೊರಬಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಬಾಗಲಗುಂಟೆ ಪೊಲೀಸರು ವಂಚಕಿ ಮಹಿಳೆಯ ಪತ್ತೆಗಾಗಿ ಬಲೆ ಬೀಸಿದ್ದಾರೆ.