ಸಾರಾಂಶ
ಬೆಂಗಳೂರು : ತಮ್ಮ ಪ್ರೇಮಕ್ಕೆ ಕುಟುಂಬ ಸದಸ್ಯರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಬೇಸತ್ತು ವಿವಾಹಿತೆ ಹಾಗೂ ಆಕೆಯ ಪ್ರಿಯಕರ ಪ್ರತ್ಯೇಕವಾಗಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ಶನಿವಾರ ನಡೆದಿದೆ.
ಸಂಪಿಗೆಹಳ್ಳಿ ಸಮೀಪದ ಶ್ರೀರಾಮಪುರದ ದಿಲ್ಶಾದ್ (24) ಹಾಗೂ ಥಣಿಸಂದ್ರದ ಜಾನ್ಸನ್ (26) ಮೃತರು. ಮನೆಯಲ್ಲಿ ಬೆಳಗ್ಗೆ ಜಾನ್ಸನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಗತಿ ತಿಳಿದು ಬೇಸರಗೊಂಡ ದಿಲ್ಶಾದ್, ಕೆಲ ಕ್ಷಣಗಳಲ್ಲಿ ತಾನು ಕೂಡ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳೆದ 6 ವರ್ಷಗಳ ಹಿಂದೆ ವಿಜಯಪುರ ಜಿಲ್ಲೆಯ ಕೃಷ್ಣ ಹಾಗೂ ದಿಲ್ಶಾದ್ ಪ್ರೀತಿಸಿ ವಿವಾಹವಾಗಿದ್ದು, ಈ ದಂಪತಿಗೆ 5 ಹಾಗೂ 2 ವರ್ಷ ವಯಸ್ಸಿನ ಇಬ್ಬರು ಮಕ್ಕಳಿದ್ದರು. ಬಳಿಕ ಕೆಲಸ ಅರಸಿಕೊಂಡು ನಗರಕ್ಕೆ ಬಂದು ಸಂಪಿಗೆಹಳ್ಳಿ ಸಮೀಪದ ಶ್ರೀರಾಮಪುರದಲ್ಲಿ ವಾಸವಾಗಿದ್ದ ದಂಪತಿ, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಕೃಷ್ಣ ಜತೆ ಮದುವೆಗೂ ಮುನ್ನ ಜಾನ್ಸನ್ ಮೇಲೆ ದಿಲ್ಶಾದ್ ಮನಸ್ಸಾಗಿತ್ತು. ಈ ತ್ರಿಕೋನ ಪ್ರೇಮ ಮದುವೆ ನಂತರವು ಮುಂದುವರೆದಿದೆ. ಕೊನೆಗೆ ಕೃಷ್ಣನಿಗೆ ಗೊತ್ತಾಗಿ ಪತ್ನಿಗೆ ಆತ ಬುದ್ಧಿಮಾತು ಹೇಳಿದ್ದ. ಆದರೆ ಜಾನ್ಸನ್ ಜತೆ ಆಕೆಯ ಸಂಪರ್ಕ ಕಡಿತವಾಗಿರಲಿಲ್ಲ. ಇದೇ ವಿಷಯವಾಗಿ ದಿಲ್ಶಾದ್ ದಂಪತಿ ಮಧ್ಯೆ ಜಗಳವಾಗುತ್ತಿದ್ದವು. ಹಲವು ಬಾರಿ ಜಾನ್ಸನ್‌ಗೆ ಸಹ ಆಕೆಯ ಪತಿ ಎಚ್ಚರಿಕೆ ಸಹ ಕೊಟ್ಟಿದ್ದರು. ಹೀಗಿದ್ದರೂ ಜೋಡಿಗಳ ಪ್ರೇಮದಾಟ ಮುಂದುವರೆದಿತ್ತು. ಈ ಪ್ರೇಮದ ಸಂಗತಿ ತಿಳಿದು ಜಾನ್ಸನ್‌ಗೆ ಆತನ ಕುಟುಂಬದವರು ಕೂಡ ಬುದ್ಧಿ ಹೇಳಿದ್ದರು. ಇದರಿಂದ ಮನನೊಂದ ಯುವಕ ಮತ್ತು ಮಹಿಳೆ ಸಾವಿಗೆ ಶರಣಾಗಿದ್ದಾರೆ.
ಈ ಘಟನೆ ಸಂಬಂಧ ಸಂಪಿಗೆಹಳ್ಳಿ ಹಾಗೂ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣಗಳು ದಾಖಲಾಗಿವೆ.
ಪ್ರಿಯತಮನ ಬೆನ್ನಲ್ಲೇ ದಿಲ್ಶಾದ್ ಆತ್ಮಹತ್ಯೆ
ತಮ್ಮ ಪ್ರೇಮಕ್ಕೆ ಕುಟುಂಬದವರು ಅಡ್ಡಿಯಾಗಿರುವುದರಿಂದ ಬೇಸತ್ತು ಆತ್ಮಹತ್ಯೆಗೆ ಪ್ರೇಮಿಗಳು ನಿರ್ಧರಿಸಿದ್ದಾರೆ. ಅಂತೆಯೇ ಮೊದಲು ತನ್ನ ಮನೆಯಲ್ಲಿ ಜಾನ್ಸನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಲ ಹೊತ್ತಿನ ಬಳಿಕ ಆತನ ಕೊಠಡಿಗೆ ಕುಟುಂಬದವರು ತೆರಳಿದಾಗ ಕೃತ್ಯ ಬೆಳಕಿಗೆ ಬಂದಿದೆ. ತನ್ನ ಪ್ರಿಯತಮ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿಯುತ್ತಿದ್ದಂತೆ ದಿಲ್ಶಾದ್ ಸಹ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸರು ವಿವರಿಸಿದ್ದಾರೆ.