ನಿಯಂತ್ರಣ ತಪ್ಪಿ ಸಂಭವಿಸಿದ ಸರಣಿ ಅಪಘಾತಕ್ಕೆ ಕ್ಯಾಂಟರ್ ಚಾಲಕ ಸಾವು, 8 ವಾಹನ ಜಖಂ

| N/A | Published : Mar 16 2025, 01:50 AM IST / Updated: Mar 16 2025, 06:03 AM IST

ಸಾರಾಂಶ

ಕ್ಯಾಂಟರ್‌ ವಾಹನವೊಂದು ಚಾಲಕ ನಿಯಂತ್ರಣ ತಪ್ಪಿ ಸಂಭವಿಸಿದ ಸರಣಿ ಅಪಘಾತದಲ್ಲಿ ಕ್ಯಾಂಟರ್‌ ವಾಹನದ ಚಾಲಕ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಬ್ಯಾಟರಾಯನಪುರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು : ಕ್ಯಾಂಟರ್‌ ವಾಹನವೊಂದು ಚಾಲಕ ನಿಯಂತ್ರಣ ತಪ್ಪಿ ಸಂಭವಿಸಿದ ಸರಣಿ ಅಪಘಾತದಲ್ಲಿ ಕ್ಯಾಂಟರ್‌ ವಾಹನದ ಚಾಲಕ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಬ್ಯಾಟರಾಯನಪುರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ತಮಿಳುನಾಡು ಮೂಲದ ಜಗನ್‌(44) ಮೃತ ಚಾಲಕ. ಪಾದಾಚಾರಿ ಮನೋಜ್‌ ಮತ್ತು ಆಟೋ ಚಾಲಕ ಚಾಂದ್‌ಪಾಷಾ (25) ಗಾಯಗೊಂಡಿದ್ದು, ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶನಿವಾರ ಮುಂಜಾನೆ ಸುಮಾರು 3.50ಕ್ಕೆ ಮೈಸೂರು ರಸ್ತೆಯ ಸ್ಯಾಟಲೆಟ್‌ ಬಸ್‌ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಈ ಸರಣಿ ಅಪಘಾತದಲ್ಲಿ ಮೂರು ಕ್ಯಾಬ್‌, ಮೂರು ಆಟೋ, ದ್ವಿಚಕ್ರ ವಾಹನ ಸೇರಿ ಒಟ್ಟು 8 ವಾಹನಗಳು ಜಖಂಗೊಂಡಿವೆ.

ಏನಿದು ಘಟನೆ? :ಮೈಸೂರು ರಸ್ತೆಯಲ್ಲಿ ಹೊಸಗುಡ್ಡದಹಳ್ಳಿ ಕಡೆಯಿಂದ ಬಾಪೂಜಿನಗರ ಕಡೆಗೆ ವೇಗವಾಗಿ ಬರುತ್ತಿದ್ದ ಕ್ಯಾಂಟರ್‌ ವಾಹನವು ಸ್ಯಾಟ್‌ಲೆಟ್‌ ಬಸ್‌ ನಿಲ್ದಾಣದ ಬಳಿ ಚಾಲಕನ ನಿಯಂತ್ರಣ ತಪ್ಪಿ ಸಂಭವಿಸಿದ ಸರಣಿ ಅಪಘಾತದಲ್ಲಿ ಮೂರು ಕ್ಯಾಬ್‌, ಮೂರು ಆಟೋ ಹಾಗೂ ಒಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಕ್ಯಾಂಟರ್‌ ವಾಹನದ ಚಾಲಕ ಜಗನ್‌ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಚಿಕಿತ್ಸೆ ಫಲಿಸದೆ ಬೆಳಗ್ಗೆ ಆತ ಮೃತಪಟ್ಟಿದ್ದಾನೆ. ಇನ್ನು ಸರಣಿ ಅಪಘಾತದಲ್ಲಿ ಗಾಯಗೊಂಡಿದ್ದ ಪಾದಾಚಾರಿ ಮನೋಜ್‌ ಮತ್ತು ಆಟೋ ಚಾಲಕ ಚಾಂದ್‌ಪಾಷಾ ಚಿಕಿತ್ಸೆ ಪಡೆದಿದ್ದಾರೆ. ಸದ್ಯಕ್ಕೆ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅತಿವೇಗ-ನಿರ್ಲಕ್ಷ್ಯದ ಚಾಲನೆ:ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಂಚಾರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಳಿಕ ರಸ್ತೆಯಲ್ಲಿ ಜಖಂಗೊಂಡಿದ್ದ ಎಂಟು ವಾಹನಗಳನ್ನು ಜೆಸಿಬಿ ಸಹಾಯದಿಂದ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಕ್ಯಾಂಟರ್ ವಾಹನ ಚಾಲಕ ಜಗನ್‌ನ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಸರಣಿ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಜಗನ್‌ ಮದ್ಯ ಸೇವಿಸಿ ಕ್ಯಾಂಟರ್‌ ವಾಹನ ಚಾಲನೆ ಮಾಡಿರುವ ಬಗ್ಗೆ ಸದ್ಯಕ್ಕೆ ಖಚಿತ ಮಾಹಿತಿ ಇಲ್ಲ. ಆತನ ರಕ್ತದ ಮಾದರಿ ಸಂಗ್ರಹಿಸಿದ್ದು, ವರದಿ ಬಂದ ಬಳಿಕ ಖಚಿತ ಮಾಹಿತಿ ಲಭ್ಯವಾಗಲಿದೆ. ಈ ಸಂಬಂಧ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.