ಸಾರಾಂಶ
ಬೆಂಗಳೂರು : ಎರಡು ದ್ವಿಚಕ್ರ ವಾಹನಗಳಿಗೆ ಒಂದೇ ನೋಂದಣಿ ಸಂಖ್ಯೆಯ ಫಲಕ ಅಳವಡಿಸಿಕೊಂಡು ಓಡಾಡುತ್ತಿದ್ದ ಸವಾರನ ವಿರುದ್ಧ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ವಿವೇಕನಗರದ ಆಂಧ್ರ ಕಾಲೋನಿ ನಿವಾಸಿ ಅಜರುದ್ದೀನ್(30) ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಒಂದೇ ನೋಂದಣಿ ಸಂಖ್ಯೆ ಫಲಕದ ಎರಡೂ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.
ಪತ್ತೆಯಾಗಿದ್ದು ಹೇಗೆ?: ಅಶೋಕನಗರ ಸಂಚಾರ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಎಂ.ಕೆ.ಶಿವರಾಜು ಅವರು ಸೆ.27ರಂದು ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದರು. ಆಂಧ್ರ ಕಾಲೋನಿಯ ಶಾಂತಿನಿಕೇತನ ಸ್ಕೂಲ್ ಬಳಿ ತೆರಳುವಾಗ ಒಂದೇ ನೋಂದಣಿ ಸಂಖ್ಯೆ ಫಲಕ (ಕೆಎ-01-ಎಚ್‌ಟಿ-9039)ದ, ಒಂದೇ ಬಣ್ಣದ ಎರಡು ಆಕ್ವೀವಾ ದ್ವಿಚಕ್ರ ವಾಹನಗಳು ಪತ್ತೆಯಾಗಿವೆ. ಈ ವೇಳೆ ಅನುಮಾಗೊಂಡ ಶಿವರಾಜು, ದ್ವಿಚಕ್ರ ವಾಹನದ ಮಾಲೀಕ ಅಜರುದ್ದೀನ್‌ನನ್ನು ವಿಚಾರಣೆ ಮಾಡಿ ದ್ವಿಚಕ್ರ ವಾಹನಗಳ ದಾಖಲೆ ತೋರಿಸುವಂತೆ ಕೇಳಿದ್ದಾರೆ. ಈ ವೇಳೆ ಆತ ಯಾವುದೇ ದಾಖಲೆ ತೋರಿಸದೆ ಪ್ರಶ್ನೆಗಳಿಗೆ ಉತ್ತರಿಸಲು ತಡಬಡಾಯಿಸಿದ್ದಾನೆ.
8 ಪ್ರಕರಣ, ₹4 ಸಾವಿರ ದಂಡ ಬಾಕಿ: ಬಳಿಕ ಈ ದ್ವಿಚಕ್ರ ವಾಹನಗಳ ವಿರುದ್ಧ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಪರಿಶೀಲಿಸಿದಾಗ 8 ಪ್ರಕರಣಗಳಲ್ಲಿ ₹4 ಸಾವಿರ ದಂಡ ಬಾಕಿಯಿರುವುದು ಕಂಡು ಬಂದಿದೆ. ಎರಡು ದ್ವಿಚಕ್ರ ವಾಹನಗಳಿಗೆ ಅಜರುದ್ದೀನ್ ಒಂದೇ ನೋಂದಣಿ ಸಂಖ್ಯೆ ಫಲಕ ಅಳವಡಿಸಿಕೊಂಡು ಸರ್ಕಾರಕ್ಕೆ ವಂಚಿಸುತ್ತಿರುವುದು ಕಂಡು ಬಂದಿದೆ. ಅಂತೆಯೇ ಈ ದ್ವಿಚಕ್ರ ವಾಹನಗಳನ್ನು ಅಪರಾಧ ಕೃತ್ಯಗಳಿಗೆ ಬಳಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಎರಡು ದ್ವಿಚಕ್ರ ವಾಹನಗಳ ಸಮೇತ ಆತನನ್ನು ವಿವೇಕನಗರ ಪೊಲೀಸರಿಗೆ ಒಪ್ಪಿಸಿದ್ದು, ಈ ಸಂಬಂಧ ದೂರು ನೀಡಿದ್ದಾರೆ.
ದೆಹಲಿಯಲ್ಲಿ ಮತ್ತೊಂದು ದ್ವಿಚಕ್ರ ವಾಹನ ಖರೀದಿ: ಆರೋಪಿ ಅಜರುದ್ದೀನ್ ನಗರದಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಾನೆ. ಈತ 2012ರಲ್ಲಿ ಕೆಎ-01-ಎಚ್‌ಟಿ-9039 ನೋಂದಣಿ ಸಂಖ್ಯೆಯ ನೀಲಿ ಬಣ್ಣದ ಆಕ್ವೀವಾ ದ್ವಿಚಕ್ರ ವಾಹನ ಖರೀದಿಸಿದ್ದಾನೆ. ಎರಡು ವರ್ಷದ ಹಿಂದೆ ದೆಹಲಿಯಲ್ಲಿ ಮತ್ತೊಂದು ಬಿಳಿ ಬಣ್ಣದ ಆಕ್ವೀವಾ ದ್ವಿಚಕ್ರ ವಾಹನ ಖರೀದಿಸಿದ್ದು, ಬಳಿಕ ಈ ದ್ವಿಚಕ್ರ ವಾಹನದ ಬಣ್ಣವನ್ನು ನೀಲಿ ಬಣ್ಣಕ್ಕೆ ಬದಲಾಯಿಸಿದ್ದಾನೆ. ಅಷ್ಟಕ್ಕೆ ಸುಮ್ಮನಾಗದೆ, ತನ್ನ ಮತ್ತೊಂದು ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆಯ ಫಲಕವನ್ನೇ ಅಳವಡಿಸಿಕೊಂಡು ಕಳೆದ ಎರಡು ವರ್ಷಗಳಿಂದ ನಗರದಲ್ಲಿ ಓಡಾಡುತ್ತಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ಈ ಸಂಬಂಧ ವಿವೇಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.