ಸಂಜೆಗೆ ಉದ್ಘಾಟನೆ ಆಗಬೇಕಿದ್ದ ಕಾಫಿ ಶಾಪ್‌ ಬೆಳಗ್ಗೆ ಅಗ್ನಿಗಾಹುತಿ

| N/A | Published : May 04 2025, 01:30 AM IST / Updated: May 04 2025, 05:47 AM IST

ಸಂಜೆಗೆ ಉದ್ಘಾಟನೆ ಆಗಬೇಕಿದ್ದ ಕಾಫಿ ಶಾಪ್‌ ಬೆಳಗ್ಗೆ ಅಗ್ನಿಗಾಹುತಿ
Share this Article
  • FB
  • TW
  • Linkdin
  • Email

ಸಾರಾಂಶ

ಅನಿಲ ಸೋರಿಕೆಯಿಂದ ಸಿಲಿಂಡರ್‌ ಸ್ಫೋಟಗೊಂಡು ಇಡೀ ಕಾಫಿ ಶಾಪ್ ಧಗ ಧಗನೇ ಹೊತ್ತಿ ಉರಿದಿದೆ

 ಪೀಣ್ಯ ದಾಸರಹಳ್ಳಿ : ಅನಿಲ್‌ ಸೋರಿಕೆಯಿಂದ ಸಿಲಿಂಡರ್‌ ಸ್ಫೋಟಗೊಂಡು ಇಡೀ ಕಾಫಿ ಶಾಪ್ ಧಗ ಧಗನೇ ಹೊತ್ತಿ ಉರಿದಿದ್ದು, ಶಾಪ್‌ನಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳು ವಸ್ತುಗಳು ಅಗ್ನಿಗೆ ಆಹುತಿಯಾಗಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು ಉತ್ತರ ತಾಲೂಕಿನ ಅಚ್ಯುತನಗರದಲ್ಲಿ ಈ ಘಟನೆ ನಡೆದಿದೆ. ಸುಜಯ್ ಎಂಬುವರಿಗೆ ಸೇರಿದ ಕಟ್ಟಡದಲ್ಲಿ ಕೇರಳ ಮೂಲದ ಭುವದಾಸ್ ಕಾಫಿ ಶಾಪ್ ನಡೆಸುತ್ತಿದ್ದರು. ಶನಿವಾರ ಸಂಜೆ ಉದ್ಘಾಟನೆಗೆ ಸಜ್ಜಾಗಿತ್ತು. ಬೆಳಗ್ಗೆ 10ರ ಸುಮಾರಿಗೆ ಖಾಸಗಿ ಏಜೆನ್ಸಿ ಬಳಿ ಎರಡು ವಾಣಿಜ್ಯ ಸಿಲಿಂಡರ್ ಖರೀದಿ ಮಾಡಲಾಗಿತ್ತು. ಖರೀದಿ ಮಾಡಿದ ಒಂದು ಗಂಟೆಯಲ್ಲೇ ಸಿಲಿಂಡರ್‌ನಲ್ಲಿ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿದೆ.

ಕಾಫಿ ಶಾಪ್ ಪಕ್ಕದಲ್ಲೇ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿದೆ. ಈ ಕಾಲೇಜಿನಲ್ಲಿ ಬಹುತೇಕ ಕೇರಳದ ವಿದ್ಯಾರ್ಥಿಗಳೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆ ವಿದ್ಯಾರ್ಥಿಗಳನ್ನು ಸೆಳೆಯುವ ನಿಟ್ಟಿನಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕಾಫಿ ಆ್ಯಂಡ್ ಕೋ ಹೆಸರಿನ ಶಾಪ್‌ ತೆರೆಯಲು ಸಿದ್ಧತೆ ನಡೆದಿತ್ತು. ಸ್ವಲ್ಪ ಯಾಮಾರಿದ್ರೂ ದೊಡ್ಡ ಮಟ್ಟದ ಸಾವು-ನೋವು ಸಂಭವಿಸುತ್ತಿತ್ತು, ಅದೃಷ್ಟವಶಾತ್ ಯಾರಿಗೂ ತೊಂದರೆ ಆಗಿಲ್ಲ. ಕಾಫಿ ಶಾಪ್ ಮಾತ್ರ ಅಗ್ನಿಗೆ ಆಹುತಿಯಾಗಿದೆ.

ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚೆಗಷ್ಟೆ ಮಾದನಾಯಕನಹಳ್ಳಿ ವ್ಯಾಪ್ತಿಯಲ್ಲಿ ಮನೆಯಲ್ಲಿ ಅನಿಲ ಸೋರಿಕೆಯಿಂದ ಅಗ್ನಿ ದುರಂತ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು.