ಸಾರಾಂಶ
ಮನೆ ಜಾಗದ ವಿಷಯವಾಗಿ ಘರ್ಷಣೆ ನಡೆದು ಪಂಚಾಯ್ತಿ ಸದಸ್ಯ ಸೇರಿದಂತೆ 7 ಮಂದಿ ವಿರುದ್ಧ ಶ್ರೀರಂಗಪಟ್ಟಣದ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಘಟನೆ ನಡೆದಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಮನೆ ಜಾಗದ ವಿಷಯವಾಗಿ ಘರ್ಷಣೆ ನಡೆದು ಪಂಚಾಯ್ತಿ ಸದಸ್ಯ ಸೇರಿದಂತೆ 7 ಮಂದಿ ವಿರುದ್ಧ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಘಟನೆ ನಡೆದಿದೆ.ಗ್ರಾಮದ ಕುಮಾರ್ ಎಸ್. ಎಂಬುವವರು ಮನೆ ಕಟ್ಟುವ ವೇಳೆಯಲ್ಲಿ ಅವರ ಜಾಗದ ಜೊತೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಗ್ರಾಮದ ರವಿ ಸೇರಿದಂತೆ ಗ್ರಾಮಸ್ಥರು ಕೇಳಿದ ವೇಳೆ ಕುಮಾರ್ ಹಾಗೂ ಇತರೆ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ಗಲಾಟೆಯಾಗಿದೆ.
ರಸ್ತೆಯಲ್ಲೇ ನನ್ನ, ಪತ್ನಿ ಹಾಗೂ ಮಗಳನ್ನು ಜುಟ್ಟು ಹಿಡಿದು ಎಳೆದಾಡಿ ಕತ್ತಿನಲ್ಲಿದ್ದ ಮಾಂಗಲ್ಯ ಸರ ಕಿತ್ತು, ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಕುಮಾರ್ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ನ್ಯಾಯಾಲಯದಲ್ಲಿದ್ದರೂ ಇಲ್ಲಿಗೆ ಬಂದು ಗಲಾಟೆ ಮಾಡಿ ಹೊಡೆದಿರುವುದು ಸಮಂಜಸವಲ್ಲ. ಕೂಡಲೇ ಪಂಚಾಯ್ತಿ ಸದಸ್ಯ ಹರೀಶ್ ಸೇರಿದಂತೆ 7 ಮಂದಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.ಆಸ್ತಿ ಕಲಹ ಎರಡು ಕುಟುಂಬಗಳಿಂದ ಹೊಡೆದಾಟ, ವೀಡಿಯೋ ವೈರಲ್..!
ಶ್ರೀರಂಗಪಟ್ಟಣ:ಆಸ್ತಿ ಕಲಹ ಹಿನ್ನೆಲೆಯಲ್ಲಿ ನಡು ರಸ್ತೆಯಲ್ಲಿಯೇ ಎರಡು ಕುಟುಂಬಗಳ ಸದಸ್ಯರು ಹೊಡೆದಾಟ ನಡೆಸಿರುವ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ತಾಲೂಕಿನ ಕಿರಂಗೂರು ಗ್ರಾಮದ ವೃತ್ತದ ಬಳಿ ಕುಟುಂಬಸ್ಥರು ಆಸ್ತಿ ವಿಚಾರಕ್ಕಾಗಿ ರಸ್ತೆಯಲ್ಲಿಯೇ ಬಡಿದಾಡಿಕೊಂಡಿದ್ದಾರೆ. ನ್ಯಾಯಾಲಯ ತೀರ್ಪು ನೀಡಿದ್ದ ಜಾಗದ ಅಳತೆ ಸಂದರ್ಭ ಪರಸ್ಪರ ಕುಟುಂಬ ಸದಸ್ಯರ ನಡುವೆಯೇ ಗಲಾಟೆ ಸಂಭವಿಸಿದ್ದು, ತಮ್ಮನ ಮಗಳಿಗೆ ಬಂದಿದ್ದ ಜಾಗದಲ್ಲಿ ಕ್ಯಾತೆ ತೆಗೆದು ಗಲಾಟೆ ನಡೆಸಿರುವ ಆರೋಪ ಕೇಳಿ ಬಂದಿದೆ. ಹಲ್ಲೆ ಬಳಿಕ ಗಾಯಾಳುಗಳನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಈ ಸಂಬಂಧ ಶ್ರೀರಂಗಪಟ್ಟಣ ಟೌನ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.ಗಾಂಜಾ ಸೇವನೆ: ಆರೋಪಿ ಬಂಧನ
ಹಲಗೂರು: ಅಕ್ರಮವಾಗಿ ಗಾಂಜಾ ಸೇವನೆ ಮಾಡುತ್ತಿದ್ದ ವ್ಯಕ್ತಿಯನ್ನು ಹಲಗೂರು ಪೊಲೀಸರು ಮಂಗಳವಾರ ಮಧ್ಯಾಹ್ನ ಬಂಧಿಸಿದ್ದಾರೆ. ಮಡಹಳ್ಳಿದೊಡ್ಡಿ ಗ್ರಾಮದ ಸುರೇಶ್ ಬಂಧಿತ ವ್ಯಕ್ತಿ. ಈತ ಹಲಗೂರಿನ ಗಣೇಶ ದೇವಸ್ಥಾನದ ಬಳಿ ಬೀಡಿಯಲ್ಲಿ ಗಾಂಜಾ ಮಿಶ್ರಣ ಮಾಡಿಕೊಂಡು ಸೇವಿಸುತ್ತಿದ್ದಾಗ ಖಚಿತ ಮಾಹಿತಿ ಆಧರಿಸಿ ಹಲಗೂರು ಪಿಎಸ್ಐ ಲೋಕೇಶ ದಾಳಿ ಮಾಡಿದ್ದಾರೆ. ಆರೋಪಿಯನ್ನು ಬಂಧಿಸಿ ಮಂಡ್ಯ ವೈದ್ಯಕೀಯ ಅಧೀಕ್ಷಕರ ಬಳಿ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ಖಚಿತಪಡಿಸಿದ್ದಾರೆ. ಆರೋಪಿಗೆ ನೋಟಿಸ್ ಜಾರಿ ಮಾಡಿ ಬಿಡುಗಡೆಗೊಳಿಸಲಾಯಿತು. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜೂಜು: 6 ಮಂದಿ ಬಂಧನ, 62,500 ರು. ವಶ
ಹಲಗೂರು: ಜೂಜಾಟದಲ್ಲಿ ತೊಡಗಿದ್ದ ಆರು ಮಂದಿ ಜೂಜುಕೋರರನ್ನು ಬಂಧಿಸಿದ ಪೋಲಿಸರು ಪಟಕ್ಕಿಟ್ಟಿದ್ದ 62,500 ರು. ಹಣವನ್ನು ವಶಪಡಿಸಿಕೊಂಡಿದ್ದಾರೆ. ಮಂಗಳವಾರ ರಾತ್ರಿ ಸಮಯದಲ್ಲಿ ಸಮೀಪದ ಡಿ.ಹಲಸಹಳ್ಳಿ ಗ್ರಾಮ ವ್ಯಾಪ್ತಿಯ ಹೊರವಲಯದ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದರು. ಖಚಿತ ಮಾಹಿತಿ ಅಧರಿಸಿ ಪಿಎಸ್ಐ ಲೋಕೇಶ ನೇತೃತ್ವದಲ್ಲಿ ದಾಳಿ ಮಾಡಿದ್ದು, ಜೂಜು ಕೋರರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.