ಸಾರಾಂಶ
ಮನೆಗೆಲಸದಾಕೆ ಮೇಲೆ ಅತ್ಯಾಚಾರ - ವಿಚಾರಣೆ ವೇಳೆ ನ್ಯಾಯಾಲಯವು ಪ್ರಜ್ವಲ್‌ಗೆ 84 ಪ್ರಶ್ನೆಗಳನ್ನು ಕೇಳಿತು. ಈ ಎಲ್ಲಾ ಪ್ರಶ್ನೆಗಳಿಗೆ ಪ್ರಜ್ವಲ್ ಉತ್ತರಿಸಿದ್ದು, ಅದನ್ನು ನ್ಯಾಯಾಲಯ ದಾಖಲಿಸಿಕೊಂಡಿತು. ಮಂಗಳವಾರವೂ ಪ್ರಜ್ವಲ್ ಹೇಳಿಕೆ ದಾಖಲು ಪ್ರಕ್ರಿಯೆ ಮುಂದುವರೆಯಲಿದೆ.
ಬೆಂಗಳೂರು : ಮನೆಗೆಲಸದಾಕೆ ಮೇಲೆ ಅತ್ಯಾಚಾರ ಎಸೆಗಿದ ಆರೋಪ ಸಂಬಂಧ ಆರೋಪಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಹೇಳಿಕೆಯನ್ನು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸೋಮವಾರ ದಾಖಲಿಸಿಕೊಂಡಿತು.
ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಈ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ನ್ಯಾಯಾಲಯವು ಆರೋಪಿ ಪ್ರಜ್ವಲ್‌ನ ಹೇಳಿಕೆ ದಾಖಲಿಸಿಕೊಂಡು ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು. ವಿಚಾರಣೆ ವೇಳೆ ನ್ಯಾಯಾಲಯವು ಪ್ರಜ್ವಲ್‌ಗೆ 84 ಪ್ರಶ್ನೆಗಳನ್ನು ಕೇಳಿತು. ಈ ಎಲ್ಲಾ ಪ್ರಶ್ನೆಗಳಿಗೆ ಪ್ರಜ್ವಲ್ ಉತ್ತರಿಸಿದ್ದು, ಅದನ್ನು ನ್ಯಾಯಾಲಯ ದಾಖಲಿಸಿಕೊಂಡಿತು. ಮಂಗಳವಾರವೂ ಪ್ರಜ್ವಲ್ ಹೇಳಿಕೆ ದಾಖಲು ಪ್ರಕ್ರಿಯೆ ಮುಂದುವರೆಯಲಿದೆ.
ಇದಕ್ಕೂ ಮುನ್ನ ನ್ಯಾಯಾಲಯವು ದೋಷಾರೋಪಪಟ್ಟಿಯಲ್ಲಿ ಪ್ರಜ್ವಲ್ ವಿರುದ್ಧದ ಆರೋಪಗಳಿಗೆ ಸಂಬಂಧಿಸಿ ಸಾಕ್ಷಿಗಳ ವಿಚಾರಣೆಯನ್ನು ಮುಕ್ತಾಯಗೊಳಿಸಿತು. ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ 2024ರ ಮೇ 31ರಂದು ಪ್ರಜ್ವಲ್ ರೇವಣ್ಣ ಅವರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.