ಸಾರಾಂಶ
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ಕೋವಿಡ್ ಅವಧಿಯ ಅವ್ಯವಹಾರದ ಕುರಿತು ನ್ಯಾ.ಮೈಕಲ್ ಕುನ್ಹಾ ಆಯೋಗ ಸರ್ಕಾರಕ್ಕೆ ಸಲ್ಲಿಕೆ ಮಾಡಿರುವ ವರದಿ ಆಧಾರಿಸಿ ಬಿಬಿಎಂಪಿಯ ಅಧಿಕಾರಿಗಳಿಗೆ ನೋಟಿಸ್ ನೀಡಲು ಪಾಲಿಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ರಾಜ್ಯದಲ್ಲಿ ಕೊರೋನಾ ಕಾಲದಲ್ಲಿ ನಡೆದ ಕೋಟ್ಯಂತರ ರು. ಹಗರಣದ ಬಗ್ಗೆ ತನಿಖೆ ನಡೆಸುವುದಕ್ಕೆ ರಾಜ್ಯ ಸರ್ಕಾರವು ನ್ಯಾ. ಮೈಕೆಲ್ ಡಿ. ಕುನ್ಹಾ ನೇತೃತ್ವದಲ್ಲಿ ಆಯೋಗ ರಚನೆ ಮಾಡಿತ್ತು. ಆಯೋಗವು ಇತ್ತೀಚಿಗೆ ಮಧ್ಯಂತರ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ.
ಬಿಬಿಎಂಪಿಗೆ ವ್ಯಾಪ್ತಿಗೆ ಸಂಬಂಧಿಸಿದಂತೆ ಕುನ್ಹಾ ನೀಡಿರುವ ವರದಿಯ ಭಾಗವನ್ನು ಬಿಬಿಎಂಪಿಯ ಮುಖ್ಯ ಆಯುಕ್ತರಿಗೆ ಕಳುಹಿಸಿಕೊಟ್ಟಿರುವ ಸರ್ಕಾರವು ಅಕ್ರಮದಲ್ಲಿ ಭಾಗಿಯಾದ ಅಧಿಕಾರಿ- ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿ 1 ವಾರದಲ್ಲಿ ಸಂಬಂಧಪಟ್ಟ ಅಧಿಕಾರಿಯಿಂದ ವಿವರಣೆ ಪಡೆದು ಸಲ್ಲಿಕೆ ಮಾಡುವಂತೆ ಸೂಚಿಸಿದೆ.
ಎರಡು ವಿಧದಲ್ಲಿ ನೋಟಿಸ್: ಅಖಿಲ ಭಾರತ ಸೇವೆಗಳಿಗೆ ಸೇರಿದ ಅಧಿಕಾರಿಗಳಿಗೆ (ಐಎಎಸ್, ಐಪಿಎಸ್, ಐಆರ್‌ಎಸ್) ಸಂಬಂಧಿಸಿದಂತೆ ಮಾತ್ರ ಅವರ ಹೆಸರುಗಳನ್ನು ಗುರುತಿಸಿ ವಿವರಣೆ ಕೋರುವ ನೋಟಿಸನ್ನು ದಾಖಲೆ ಸಹಿತ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿಕೊಡಬೇಕು. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ನೋಟಿಸ್ ಜಾರಿ ಮಾಡಲಿದ್ದಾರೆ. ಉಳಿದಂತೆ ರಾಜ್ಯ ಸರ್ಕಾರಿ ಸೇವೆಯ ಅಧಿಕಾರಿಗಳಿಗೆ ಬಿಬಿಎಂಪಿಯಿಂದಲೇ ನೋಟಿಸ್ ಜಾರಿಗೊಳಿಸುವುದು ಎಂದು ಸೂಚಿಸಲಾಗಿದೆ.
ಈ ಹಿನ್ನೆಲೆ ಅಧಿಕಾರಿವಾರು ಪಟ್ಟಿ ಮಾಡುತ್ತಿದ್ದಾರೆ. ಪ್ರಮುಖವಾಗಿ ಐಎಎಸ್ ಅಧಿಕಾರಿಗಳು, ಆರೋಗ್ಯ ವಿಭಾಗದ ಅಧಿಕಾರಿಗಳು, ಎಂಜಿನಿಯರಿಂಗ್ ಅಧಿಕಾರಿಗಳು, ಹಣಕಾಸು ವಿಭಾಗದ ಅಧಿಕಾರಿಗಳು ಪ್ರತ್ಯೇಕ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ. ಅದರಲ್ಲೂ ಕೇಂದ್ರ ಕಚೇರಿ ಹಾಗೂ ವಲಯವಾರು ಅಧಿಕಾರಿ- ಸಿಬ್ಬಂದಿ ಪಟ್ಟಿ ಸಿದ್ಧಪಡಿಸಲಾಗುತ್ತಿದೆ.
ವಸೂಲಿ ಹಾಗೂ ಶಿಸ್ತು ಕ್ರಮ: ರಾಜ್ಯ ಸರ್ಕಾರಿ ಸೇವೆಯ ಅಧಿಕಾರಿಗಳಿಂದ ವಿವರಣೆ ಸ್ವೀಕೃತಗೊಂಡ ಬಳಿಕ ದಾಖಲೆಗಳೊಂದಿಗೆ ಪರಿಶೀಲಿಸಿ ಅಗತ್ಯವಿದ್ದಲ್ಲಿ ಶಿಸ್ತು ಕ್ರಮ ಹಾಗೂ ವಸೂಲಾತಿ ಕ್ರಮಕ್ಕೆ ಶಿಫಾರಸ್ಸು ಮಾಡಿ ಸ್ಪಷ್ಟ ಅಭಿಪ್ರಾಯದೊಂದಿಗೆ ಸರ್ಕಾರಕ್ಕೆ ವರದಿ ಸಲ್ಲಿಕೆಬೇಕೆಂದು ಸರ್ಕಾರ ಸೂಚಿಸಿದೆ. ಯಾವುದಾದರೂ ಕಡತ ಲಭ್ಯವಿಲ್ಲದಿದ್ದಲ್ಲಿ ಹಾಗೂ ಕನ್ಹಾ ಆಯೋಗವು ಗುರುತಿಸಿರುವ ಲಭ್ಯಪಡಿಸಲಾದ ಕಡತಗಳನ್ನು ಸೇರಿ ಅವುಗಳನ್ನು ಹುಡುಕಿ ಪಡೆದು ಪರಿಶೀಲಿಸಬೇಕು. ಒಂದು ವೇಳೆ ಕಳೆದು ಹೋಗಿದ್ದರೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ಪ್ರತ್ಯೇಕ ವರದಿ ಸಲ್ಲಿಸಬೇಕು. ಸರಬರಾಜು ಏಜೆನ್ಸಿಗಳ ಅಕ್ರಮ ಕಂಡು ಬಂದರೆ ನೋಟಿಸ್ ನೀಡಿ ಕಾಲಮಿತಿಯಲ್ಲಿ ಕ್ರಮ ಕೈಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸರ್ಕಾರ ನಿರ್ದೇಶಿಸಿದೆ.
402 ಪುಟದ ವರದಿ: ಮೈಕಲ್ ಕುನ್ಹಾ ಆಯೋಗವು ನೀಡಿರುವ ವರದಿಯ 5ನೇ ಭಾಗದಲ್ಲಿ ಬಿಬಿಎಂಪಿಗೆ ಸಂಬಂಧಿಸಿದ ಹಗರಣಗಳ ಬಗ್ಗೆ ಉಲ್ಲೇಖಿಸಲಾಗಿದೆ. ಈ ಪೈಕಿ ಸದ್ಯ 402 ಪುಟದ ಮೂಲ ವರದಿಯನ್ನು ಬಿಬಿಎಂಪಿಗೆ ನೀಡಲಾಗಿದೆ. ಇದರಲ್ಲಿ ಪುಟ ಸಂಖ್ಯೆ 1,320 ರಿಂದ 1,466 ಪುಟದ ವರೆಗೆ ಬಿಬಿಎಂಪಿಯ ಕೇಂದ್ರ ಕಚೇರಿಗೆ ಸಂಬಂಧಿಸಿದ ಲೋಪ ದೋಷಗಳನ್ನು ಪಟ್ಟಿ ಮಾಡಲಾಗಿದೆ. ಉಳಿದಂತೆ ದಾಸರಹಳ್ಳಿ, ಪೂರ್ವ ವಲಯ, ಮಹದೇವಪುರ ಹಾಗೂ ರಾಜರಾಜೇಶ್ವರಿ ನಗರ ವಲಯಕ್ಕೆ ಸಂಬಂಧಿಸಿದ ಪುಟ ಸಂಖ್ಯೆ 1,467 ರಿಂದ 1,722 ವರೆಗಿನ ಪುಟಗಳಲ್ಲಿ ವಿವರಣೆಯ ವರದಿ ನೀಡಲಾಗಿದೆ.
8 ವಲಯ ಪೈಕಿ 4 ವಲಯದ ವರದಿ ಬಾಕಿ: ಬಿಬಿಎಂಪಿಯ 8 ವಲಯದ ಪೈಕಿ ಕೇಂದ್ರ ಕಚೇರಿ ಹಾಗೂ 4 ವಲಯದ ಕುನ್ಹಾ ವರದಿಯನ್ನು ಸದ್ಯ ಬಿಬಿಎಂಪಿಗೆ ಕಳುಹಿಸಿಕೊಡಲಾಗಿದೆ. ದಕ್ಷಿಣ ವಲಯ, ಪಶ್ಚಿಮ ವಲಯ, ಯಲಹಂಕ, ಬೊಮ್ಮನಹಳ್ಳಿ ವಲಯಕ್ಕೆ ಸಂಬಂಧಿಸಿದ ವರದಿಯನ್ನು ಬಿಬಿಎಂಪಿಗೆ ಕಳುಹಿಸಿಕೊಟ್ಟಿಲ್ಲ. ಈ ವಲಯಗಳಿಗೆ ಸಂಬಂಧಿಸಿದ ವರದಿ ಸರ್ಕಾರದಿಂದ ಬಂದ ನಂತರ ಆಯಾ ವಲಯ ಆಯುಕ್ತರಿಗೆ ಕಳುಹಿಸಿಕೊಡುವುದಾಗಿ ಬಿಬಿಎಂಪಿ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.