ಸಾರಾಂಶ
ಬಳ್ಳಾರಿ : ಬಳ್ಳಾರಿ ಕೇಂದ್ರ ಕಾರಾಗೃಹದ ಹೈ ಸೆಕ್ಯುರಿಟಿ ಸೆಲ್‌ನಲ್ಲಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿ, ನಟ ದರ್ಶನ್ ಟಿವಿ ಸೌಲಭ್ಯ ಕಲ್ಪಿಸುವಂತೆ ಜೈಲು ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ.
ಇತ್ತೀಚೆಗೆ ಜೈಲಿಗೆ ಭೇಟಿ ನೀಡಿದ್ದ ಉತ್ತರ ವಲಯದ ಡಿಐಜಿ ಟಿ.ಪಿ. ಶೇಷಾ ಅವರ ಬಳಿ ಶೌಚಕ್ಕೆ ಸರ್ಜಿಕಲ್ ಚೇರ್ ನೀಡುವಂತೆ ದರ್ಶನ್ ಮೊರೆ ಇಟ್ಟಿದ್ದರು. ಅಂತೆಯೇ ಅವರ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿ, ಸೋಮವಾರವಷ್ಟೇ ಸರ್ಜಿಕಲ್ ಚೇರ್ ನೀಡಿದ್ದರು. ಇದೀಗ ದರ್ಶನ್ ಟೀವಿ ಸೌಕರ್ಯದ ಕೋರಿಕೆ ಇಟ್ಟಿದ್ದು, ಈ ಸಂಬಂಧ ಜೈಲು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇನ್ನೆರೆಡು ದಿನಗಳಲ್ಲಿ ದರ್ಶನ್ ಅವರಿಗೆ ಟಿವಿ ಸೌಕರ್ಯ ಕಲ್ಪಿಸುವ ಸಾಧ್ಯತೆಯಿದೆ.
ಸದ್ಯ ಸಮಯ ಕಳೆಯಲು ದರ್ಶನ್ ಪುಸ್ತಕಗಳ ಮೊರೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ. ತಮ್ಮ ವಿರುದ್ಧ ಇನ್ನೆರಡು ದಿನಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾಗಲಿದ್ದು, ಆ ಕುರಿತ ಸುದ್ದಿಗಳನ್ನು ವೀಕ್ಷಿಸಲು ದರ್ಶನ್ ಟೀವಿ ಸೌಲಭ್ಯ ಕೇಳಿದ್ದಾರೆ ಎನ್ನಲಾಗುತ್ತಿದೆ. ಕಳೆದ ಗುರುವಾರ ದರ್ಶನ್‌ರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಯ ಜೈಲಿಗೆ ಸ್ಥಳಾಂತರಿಸಲಾಗಿತ್ತು. ವಿಚಾರಣಾಧೀನ ಕೈದಿಯಾಗಿರುವ ದರ್ಶನ್ ಮೇಲೆ ಜೈಲು ಅಧಿಕಾರಿಗಳ ತೀವ್ರ ನಿಗಾ ಇರಿಸಿದ್ದಾರೆ.