ಸಾರಾಂಶ
ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಕುಖ್ಯಾತ ಅಂತಾರಾಜ್ಯ ಬ್ಯಾಂಕ್ ದರೋಡೆಕೋರರ ಗ್ಯಾಂಗ್ ಅನ್ನು ಬಂಧಿಸಿರುವ ಘಟನೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕ್ರಾಸ್ ಬಳಿ ನಡೆದಿದೆ.
ಹೊನ್ನಾಳಿ/ನ್ಯಾಮತಿ : ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಕುಖ್ಯಾತ ಅಂತಾರಾಜ್ಯ ಬ್ಯಾಂಕ್ ದರೋಡೆಕೋರರ ಗ್ಯಾಂಗ್ ಅನ್ನು ಬಂಧಿಸಿರುವ ಘಟನೆ ದಾವಣಗೆರ ಜಿಲ್ಲೆ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕ್ರಾಸ್ ಬಳಿ ನಡೆದಿದೆ. ಉತ್ತರ ಪ್ರದೇಶದ ಬಾದಾಯ್ ಜಿಲ್ಲೆಯ ಕಕ್ರಾಳ ಗ್ರಾಮದ ಗುಡ್ಡು ಆಲಿಯಸ್ ಕಾಲಿಯಾ (45), ಹಜರತ್ ಆಲಿ (50), ಅಸ್ಲಾಂ ಅಲಿಯಾಸ್ ಟನ್ ಟನ್ (55), ಕಮರುದ್ದಿನ್ ಅಲಿಯಾಸ್ ಬಾಬು ಸೆರೆಲಿ (40) ಬಂಧಿತರು. ಇನ್ನು ಉತ್ತರ ಪ್ರದೇಶದ ಬಚೌರ ಗ್ರಾಮದ ರಾಜಾರಾಮ್, ನೌಲಿ ಗ್ರಾಮದ ಬಾಬುಷಾ, ಕೋಲಾರ ಜಿಲ್ಲೆ ಮಾಲೂರಿನ ಅಪೀಜ್ ಪಾರಾರಿಯಾಗಿದ್ದು, ಪತ್ತೆಗಾಗಿ ಪೊಲೀಸರ ತಂಡ ರಚಿಸಲಾಗಿದೆ.
ಭಾನುವಾರ ಹೊನ್ನಾಳಿ ಮತ್ತು ನ್ಯಾಮತಿ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆ ವೇಳೆ ಗ್ಯಾಂಗ್‌ನ ಒಬ್ಬ ಸದಸ್ಯ ತಪ್ಪಿಸಿಕೊಳ್ಳಲು ಪೇದೆ ಮೇಲೆ ಮಚ್ಚಿನಿಂದ ದಾಳಿ ಮಾಡಿದಾಗ, ಆತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಈ ದರೋಡೆಕೋರರ ಗ್ಯಾಂಗ್ ನ್ಯಾಮತಿ ತಾಲೂಕಿನ ಸವಳಂಗ ಎಸ್‌ಬಿಐ ಬ್ಯಾಂಕ್ ದರೋಡೆ ಮಾಡಲು ಸಂಚು ರೂಪಿಸಿತ್ತು ಎಂದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ. ಈ ಗ್ಯಾಂಗ್ ಜಾರ್ಖಂಡ್, ತಮಿಳುನಾಡು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಳ್ಳತನ ಮಾಡಿದ್ದು, ಬಂಧಿತರ ವಿರುದ್ಧ ಈಗಾಗಲೇ ದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಮಚ್ಚಿನಿಂದ ಏಟು ಬಿದ್ದ ಪೇದೆ ಆನಂದ್ ಹಾಗೂ ಗುಂಡಿನೇಟಿಗೆ ಒಳಗಾದ ದರೋಡೆಕೋರ ಗುಡ್ಡು ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗುಂಡು, ಮಾರಕಾಸ್ತ್ರಗಳು ವಶ : ಘಟನಾಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಹರಿಹರದಿಂದ ಬರುತ್ತಿದ್ದ ಯುಪಿ ನೋಂದಣೆಯ 2 ಕಾರುಗಳು ಹರಿಹರ, ಹೊನ್ನಾಳಿ ಚೆಕ್‌ಪೋಸ್ಟ್ ಬಳಿ ನಿಲ್ಲಿಸದೆ ನ್ಯಾಮತಿ ಕಡೆ ಸಾಗಿದ್ದಾರೆ. ಅರಬಗಟ್ಟೆ ಕ್ರಾಸ್ ಬಳಿ ರಾತ್ರಿ 1.30ರ ಸಮಯದಲ್ಲಿ ನ್ಯಾಮತಿ ಪೊಲೀಸರು ಕಾರುಗಳನ್ನು ನಿಲ್ಲಿಸಿದಾಗ ದರೋಡೆಕೋರರು ಕಾಲ್ಕಿತ್ತಿದ್ದು, ಪೊಲೀಸರು ಬೆನ್ನಟ್ಟಿ ನಾಲ್ವರನ್ನು ಬಂಧಿಸಿದ್ದಾರೆ. ವಾಹನಗಳಲ್ಲಿದ್ದ ಮಾರಕಾಸ್ತ್ರಗಳು, 4 ಜೀವಂತ ಗುಂಡುಗಳು, ಆಕ್ಸಿಜನ ಸಿಲೆಂಡರ್ ರೆಗ್ಯುಲೇಟರ್, 3 ಕಬ್ಬಿನ ರಾಡ್, 5 ಪ್ಯಾಕೆಟ್ ಮೆಣಸಿನ ಪುಡಿ, 5 ಜತೆ ಹ್ಯಾಂಡ್‌ಗ್ಲೌಸ್, ಒಂದು ಮಚ್ಚು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.