ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿಯಲ್ಲಿ ಡ್ರಗ್ಸ್ ಮಾರಾಟ ದಂಧೆ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿ ಮೂವರನ್ನು ಪ್ರತ್ಯೇಕವಾಗಿ ಬಂಧಿಸಿ 11 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಸಿಸಿಬಿ ಹಾಗೂ ಸ್ಥಳೀಯರು ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.

ದೊಡ್ಡ ಬಿದರಕಲ್ಲಿನ ಎಚ್‌.ಎಂ. ಮಣಿ, ಬೀದರ್ ಜಿಲ್ಲೆ ಬಸವಕಲ್ಯಾಣದ ಕಿರಣ್, ವೈಟ್‌ಫೀಲ್ಡ್‌ನ ಮಥೀನ್ ಪಾಷ, ಬಿದರಹಳ್ಳಿಯ ರಾಜೇಶ್‌ ಹಾಗೂ ಮೊಹಮ್ಮದ್ ಗೌಸ್ ಬಂಧಿತರಾಗಿದ್ದು, ಆರೋಪಿಗಳಿಂದ 3.912 ಕೆಜಿ ಎಂಡಿಎಂಎಂ, ಮೂರು ಕ್ವಿಂಟಲ್‌ ಗಾಂಜಾ, ಮೊಬೈಲ್ ಹಾಗೂ ಸರಕು ಸಾಗಾಣಿಕೆ ವಾಹನ ಸೇರಿ ಒಟ್ಟು 11.29 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿಯಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

ನಗರದಲ್ಲಿ ಡ್ರಗ್ಸ್ ಮಾರಾಟಕ್ಕೆ ಆರೋಪಿಗಳು ಯತ್ನಿಸಿದ್ದಾಗ ಖಚಿತ ಮಾಹಿತಿ ಪಡೆದು ಸಿಸಿಬಿ, ಉಪ್ಪಾರಪೇಟೆ ಹಾಗೂ ಕಾಡುಗೋಡಿ ಠಾಣೆಗಳ ಪೊಲೀಸರು ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.

ದೊಡ್ಡ ಮಟ್ಟದ ಗಾಂಜಾ ಹಿಡಿದ ಸಿಸಿಬಿ


ಆಂಧ್ರಪ್ರದೇಶದ ರಾಜಧಾನಿಗೆ ಟನ್‌ಗಟ್ಟಲೇ ಗಾಂಜಾ ಪೂರೈಸುತ್ತಿದ್ದ ಡ್ರಗ್ಸ್ ದಂಧೆಕೋರರೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ದೊಡ್ಡಬಿದರಕಲ್ಲಿನ ಮಣಿ ಬಂಧಿತನಾಗಿದ್ದು, ಈತನ ಬಳಿ 3.57 ಕೋಟಿ ರು. ಬೆಲೆಯ 343.17 ಕೆ.ಜಿ ಗಾಂಜಾ ಹಾಗೂ ಸರಕು ಸಾಗಾಣಿಕೆ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಂಧ್ರಪ್ರದೇಶದ ಅರಕು ಎಂಬ ಊರಿನಿಂದ ನಗರಕ್ಕೆ ಗಾಂಜಾ ಸರಬರಾಜಾಗುತ್ತಿದೆ ಎಂಬ ಮಾಹಿತಿ ಸಿಸಿಬಿಯ ಮಾದಕ ನಿಗ್ರಹ ದಳಕ್ಕೆ ಲಭ್ಯವಾಗಿದೆ. ಕೂಡಲೇ ಸಿಸಿಬಿ ಡಿಸಿಪಿ-2 ರಾಜಾ ಇಮಾಮ್ ಕಾಸಿಂ ಮಾರ್ಗದರ್ಶನದಲ್ಲಿ ಎಸಿಪಿ ನಾಗರಾಜ್ ಹಾಗೂ ಇನ್ಸ್‌ಪೆಕ್ಟರ್ ಮಂಜಪ್ಪ ನೇತೃತ್ವದ ತಂಡವು ಕಾರ್ಯಾಚರಣೆಗಿಳಿದಿದೆ. ಆಂಧ್ರಪ್ರದೇಶದಿಂದಲೇ ಬೆನ್ನತ್ತಿ ಕೊನೆಗೆ ಮೈಸೂರು ರಸ್ತೆ ನಾಯಂಡಹಳ್ಳಿ ಬಳಿ ಆರೋಪಿಯನ್ನು ಸಿಸಿಬಿ ಸೆರೆ ಹಿಡಿದಿದೆ ಎಂದು ತಿಳಿದು ಬಂದಿದೆ.

ಬಸವಕಲ್ಯಾಣದ ವ್ಯಕ್ತಿ ಬಳಿ 7 ಕೋಟಿ ಡ್ರಗ್ಸ್!

ಫೇಸ್‌ಬುಕ್ ಗೆಳೆತನದಿಂದ ಡ್ರಗ್ಸ್ ದಂಧೆಗಿಳಿದಿದ್ದ ಬೀದರ್ ಜಿಲ್ಲೆ ಬಸವಕಲ್ಯಾಣದ ಕಿರಣ್‌ ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ.

ಫೇಸ್‌ಬುಕ್‌ ಗೆಳೆಯನ ಸೂಚನೆ ಮೇರೆಗೆ ಗ್ರಾಹಕನಿಗೆ ಡ್ರಗ್ಸ್ ಪೂರೈಸಲು ಬಂದು ಗಾಂಧಿನಗರ ಸಮೀಪದ ಲಾಡ್ಜ್‌ನಲ್ಲಿ ಆತ ತಂಗಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಉಪ್ಪಾರಪೇಟೆ ಠಾಣೆಯ ಸಬ್ ಇನ್ಸ್‌ಪೆಕ್ಟರ್‌ ಯಲ್ಲಾಲಿಂಗ ನೇತೃತ್ವದ ತಂಡ ದಾಳಿ ನಡೆಸಿದೆ. ಆರೋಪಿ ಬಳಿ 7. 60 ಕೋಟಿ ರು. ಮೌಲ್ಯದ ಎಡಿಎಂಎಂ ಜಪ್ತಿಯಾಗಿದೆ. ಕಿರಣ್ ಕ್ರಿಮಿನಲ್ ಹಿನ್ನೆಲೆಯುಳ್ಳವನಾಗಿದ್ದು, ಈತನನ್ನು ವಂಚನೆ ಪ್ರಕರಣದಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದರು. ಬಳಿಕ ಒಂದೂವರೆ ವರ್ಷ ಜೈಲಿನಲ್ಲಿದ್ದು ಬಳಿಕ ಜಾಮೀನು ಪಡೆದು ಕಿರಣ್ ಹೊರಬಂದಿದ್ದ. ಎಂಟು ತಿಂಗಳ ಹಿಂದೆ ಆತನಿಗೆ ಡ್ರಗ್ಸ್ ಪೆಡ್ಲರ್ ಪರಿಚಯವಾಗಿದೆ. ಆಗ ಆತನಿಗೆ ಹಣದಾಸೆ ತೋರಿಸಿ ಡ್ರಗ್ಸ್ ಮಾರಾಟ ಜಾಲಕ್ಕೆ ಆತನನ್ನು ಪೆಡ್ಲರ್ ಸೆಳೆದಿದ್ದಾನೆ.

ದೆಹಲಿಯಿಂದ ಎಡಿಎಂಎ ಡ್ರಗ್ಸ್ ಅನ್ನು ಕಿರಣ್‌ಗೆ ದಂಧೆಕೋರ ಕಳುಹಿಸುತ್ತಿದ್ದ. ಬಳಿಕ ಆತ ಸೂಚಿಸಿದ ಗ್ರಾಹಕರಿಗೆ ಕಿರಣ್ ಮೂಲಕ ಡ್ರಗ್ಸ್ ತಲಪುತ್ತಿತ್ತು. ಅಂತೆಯೇ ಫೇಸ್‌ಬುಕ್ ಗೆಳೆಯ ವಾಟ್ಸಪ್‌ಗೆ ಕಳುಹಿಸಿದ್ದ ಲೋಕೇಷನ್‌ ಆಧರಿಸಿ ಗ್ರಾಹಕನಿಗೆ ಆರೋಪಿ ಡ್ರಗ್ಸ್ ನೀಡಲು ಮುಂದಾಗಿದ್ದ. ಅಷ್ಟರಲ್ಲಿ ಕಿರಣ್ ಪೊಲೀಸರ ಬಲೆಗೆ ಬಿದ್ದಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ಬಸವಕಲ್ಯಾಣದಲ್ಲಿ ಆತ ನೆಲೆಸಿದ್ದ. ಆದರೆ ಹಣದಾಸೆಗೆ ಬಿದ್ದು ಅಪರಾಧ ಕೃತ್ಯ ಎಸಗಿ ಆತ ಮತ್ತೆ ಜೈಲು ಸೇರಿದ್ದಾನೆ.

ಒಡಿಶಾದ ಕಾರ್ಮಿಕರು ಸೆರೆ!

ಕಾಡುಗೋಡಿ ಠಾಣೆ ಪೊಲೀಸರು ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ಮೂವರು ಪೆಡ್ಲರ್‌ಗಳು ಸೆರೆಯಾಗಿದ್ದಾರೆ. ತನ್ನೂರಿನಿಂದ ಗಾಂಜಾ ತಂದು ನಗರದಲ್ಲಿ ಒಡಿಶಾ ಮೂಲದ ರಾಜೇಶ್‌ ಮಾರಾಟ ಮಾಡುತ್ತಿದ್ದ. ಹಣದಾಸೆ ತೋರಿಸಿ ಸ್ಥಳೀಯರಾದ ಗೌಸ್‌ ಹಾಗೂ ಮತೀನ್‌ನನ್ನು ಆತ ಬಳಸಿಕೊಂಡಿದ್ದ. ಆರೋಪಿಗಳಿಂದ 12 ಗ್ರಾಂ ಎಂಡಿಎಂಎ ಹಾಗೂ 11.170 ಕೆಜಿ ಗಾಂಜಾವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡ್ರಗ್ಸ್ ನಾಶಪಡಿಸಿದ ಕಸ್ಟಮ್ಸ್

ತಾನು ಜಪ್ತಿ ಮಾಡಿದ್ದ ಕೋಟ್ಯಂತರ ರು. ಮೌಲ್ಯದ ಡ್ರಗ್ಸ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ಸುಟ್ಟು ಹಾಕಿದ್ದಾರೆ.

ವಿವಿಧ ಪ್ರಕರಣಗಳಲ್ಲಿ ಜಪ್ತಿಯಾಗಿದ್ದ ಒಟ್ಟು 287.5 ಕೆಜಿ ಹೈಡ್ರೋ ಗಾಂಜಾ ಹಾಗೂ 1.17 ಕೆಜಿ ಕೊಕೇನ್‌ ಅನ್ನು ಬೆಂಕಿಗೆ ಹಾಕಿ ಕಸ್ಟಮ್ಸ್ ಅಧಿಕಾರಿಗಳು ನಾಶಗೊಳಿಸಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡ್ರಗ್ಸ್ ಅನ್ನು ಕಸ್ಟಮ್ಸ್ ಜಪ್ತಿ ಮಾಡಿತ್ತು.