ಸಾರಾಂಶ
ಶ್ರೀರಂಗಪಟ್ಟಣ : ಕುಡಿದ ಅಮಲಿನಲ್ಲಿ ಮಾತಿನ ಚಕಮಕಿ ನಡೆದು ಸ್ನೇಹಿತನ್ನೇ ಚಾಕುವಿನಿಂದ ಕತ್ತು ಕುಯ್ದು ಹತ್ಯೆ ಮಾಡಿರುವ ಘಟನೆ ತಾಲೂಕಿನ ಬೆಳಗೊಳ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮೋಹನ್ ಕುಮಾರ್ (44) ಹತ್ಯೆಯಾದ ವ್ಯಕ್ತಿ. ಅದೇ ಗ್ರಾಮದ ಪಕ್ಕದ ಮನೆಯ ಮೃತನ ಸ್ನೇಹಿತ ರವಿಚಂದ್ರ ಹತ್ಯೆ ಮಾಡಿರುವ ಆರೋಪಿ ಎಂದು ತಿಳಿದು ಬಂದಿದೆ.
ಈ ಇಬ್ಬರು ಸ್ನೇಹಿತರು ಮನೆಗಳಿಗೆ ಬಣ್ಣ ಬಳಿಯುವ ಕೆಲಸ ಮಾಡಿಕೊಂಡಿದ್ದರು. ಪ್ರತಿ ನಿತ್ಯ ಸಂಜೆ ಮೋಹನ್ ಕುಮಾರ್ ಮನೆಯಲ್ಲಿ ಮದ್ಯ ಸೇವಿಸುತ್ತಿದ್ದರು ಎನ್ನಲಾಗಿದೆ. ಎಂದಿನಂತೆ ಬುಧವಾರ ತಡರಾತ್ರಿವರೆಗೂ ಮದ್ಯ ಸೇವಿಸಿ ಮತ್ತೇರಿಸಿಕೊಂಡ ಇಬ್ಬರು ಅವ್ಯಾಚಶಬ್ದಗಳಿಂದ ನಿಂದಿಸಿಕೊಂಡು, ಮಾತಿಗೆ ಮಾತು ಬೆಳೆದಿದೆ.
ಈ ವೇಳೆ ರವಿಚಂದ್ರ ಕೋಪಗೊಂಡು ಮನೆಯಲ್ಲಿ ಇಟ್ಟಿದ್ದ ಚಾಕು ತೆಗೆದುಕೊಂಡು ಮೋಹನ್ ಕುಮಾರ್ ಕತ್ತು ಕುಯ್ದಿದ್ದಾನೆ. ಅತಿಯಾದ ರಕ್ತ ಸೋರಿಕೆಯಾಗಿ ಸ್ಥಳದಲ್ಲೇ ಒದ್ದಾಡಿ ಮೋಹನ್ ಕುಮಾರ್ ಮೃತನಾಗಿದ್ದಾನೆ.
ನಂತರ ಅಕ್ಕ-ಪಕ್ಕದ ಮನೆಯವರಿಗೆ ವಿಷಯ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಕೆಆರ್‌ಎಸ್ ಪೊಲೀಸರು, ಘಟನಾ ಸ್ಥಳದಲ್ಲಿದ್ದ ಆರೋಪಿ ರವಿಂಚಂದ್ರನನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ನಂತರ ಗುರುವಾರ ಬೆಳಗ್ಗೆ ಪೊಲೀಸರು ಶವವನ್ನು ಮೈಸೂರಿನ ಆಸ್ಪತ್ರೆ ಶವಗಾರ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಸ್ಥಳಕ್ಕೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್‌ಪಿ ಶಾಂತ ಮಲ್ಲಪ್ಪ, ಇನ್ಸ್‌ಪೆಕ್ಟರ್ ಪುನೀತ್ ಇತರರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ರಸ್ತೆ ಬದಿ ನಿಂತಿದ್ದ ಬೈಕ್ ಕಳವು
ಹಲಗೂರು: ಅಂಗನವಾಡಿ ಕೇಂದ್ರಕ್ಕೆ ಮಗು ಬಿಡಲು ಹೋಗಿ, ಹಿಂದುರುಗಿ ಬರುವಷ್ಟರಲ್ಲಿ ಮೋಟಾರ್ ಬೈಕ್ ಕಳುವಾಗಿರುವ ಘಟನೆ ಸಮೀಪದ ಡಿ.ಹಲಸಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ನಿರಂಜನ್ ಕುಮಾರ್ ಅವರು ಮಾ.19 ರಂದು ಬುಧವಾರ ಬೆಳಗ್ಗೆ 10:30 ರ ಸಮಯದಲ್ಲಿ ತಮ್ಮ ಮಗುವನ್ನು ಸ್ವಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಬಿಡಲು ಬೈಕ್ ನಲ್ಲಿ ತೆರಳಿದ್ದರು. ರಸ್ತೆ ಬದಿಯಲ್ಲಿ ತಮ್ಮ ಹೀರೋ ಹೊಂಡಾ ಸ್ಪ್ಲೆಂಡರ್ ಬೈಕ್ ನಿಲ್ಲಿಸಿ ಅಂಗನವಾಡಿ ಕೇಂದ್ರಕ್ಕೆ ಮಗು ಬಿಟ್ಟು ಬರುವಷ್ಟರಲ್ಲಿ ಬೈಕ್ ನಾಪತ್ತೆಯಾಗಿದೆ ಎಂದು ನಿರಂಜನ್ ಕುಮಾರ್ ದೂರು ದಾಖಲಿಸಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.