ಸಾರಾಂಶ
ಪಕ್ಕದ ಮನೆಯ ಯುವಕನನ್ನು ಪ್ರೀತಿಸುತ್ತಿದ್ದ ಮಗಳಿಗೆ ಬುದ್ಧಿ ಹೇಳಿದರೂ ಕೇಳದ ಕಾರಣ ಕುಪಿತನಾದ ತಂದೆ ಮರ್ಯಾದೆಗೆ ಅಂಜಿ ಮಗಳನ್ನು ಹತ್ಯೆಗೈದು ಕೃಷ್ಣಾ ನದಿಗೆ ಎಸೆದ ಹೃದಯ ವಿದ್ರಾವಕ ಘಟನೆ ಬರೋಬ್ಬರಿ ಏಳು ತಿಂಗಳ ನಂತರ ಬೆಳಕಿಗೆ ಬಂದಿದೆ.
ಲಿಂಗಸುಗೂರು : ಪಕ್ಕದ ಮನೆಯ ಯುವಕನನ್ನು ಪ್ರೀತಿಸುತ್ತಿದ್ದ ಅಪ್ರಾಪ್ತ ಮಗಳಿಗೆ ಬುದ್ಧಿ ಹೇಳಿದರೂ ಕೇಳದ ಕಾರಣ ಕುಪಿತನಾದ ತಂದೆ ಮರ್ಯಾದೆಗೆ ಅಂಜಿ ಮಗಳನ್ನು ಹತ್ಯೆಗೈದು ಕೃಷ್ಣಾ ನದಿಗೆ ಎಸೆದ ಹೃದಯ ವಿದ್ರಾವಕ ಘಟನೆ ಬರೋಬ್ಬರಿ ಏಳು ತಿಂಗಳ ನಂತರ ಬೆಳಕಿಗೆ ಬಂದಿದೆ.
ಪ್ರಿಯಕರನ ವಿರುದ್ಧ ದಾಖಲಿಸಿದ್ದ ಪೋಕ್ಸೋ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಬಂದಾಗ ನ್ಯಾಯಾಧೀಶರು ಬಾಲಕಿಯನ್ನು ಹಾಜರುಪಡಿಸಲು ಸೂಚಿಸಿದ್ದಾರೆ. ಇದರಿಂದಾಗಿ ಬಹುತೇಕ ಮುಚ್ಚಿ ಹೋಗಿದ್ದ ಪ್ರಕರಣ ಬಯಲಿಗೆ ಬಂದಿದೆ. ಪುತ್ರಿಯನ್ನೇ ಕೊಂದ ತಂದೆಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಹಂಚಿನಾಳ ಗ್ರಾಮದ ಲಕ್ಕಪ್ಪ ಕಂಬಳಿ ಬಂಧಿತ.
ಏನಿದು ಪ್ರಕರಣ?:
ಕುರುಬ ಸಮುದಾಯಕ್ಕೆ ಸೇರಿದ ಲಕ್ಕಪ್ಪ ಕಂಬಳಿ ಮಗಳು ರೇಣುಕಾ (17) ಅದೇ ಗ್ರಾಮದ ಪರಿಶಿಷ್ಟ ಪಂಗಡಕ್ಕೆ ಸೇರಿದ ಹನುಮಂತ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ರೇಣುಕಾಳನ್ನು ಹನುಮಂತ ಅಪಹರಣ ಮಾಡಿದ್ದಾನೆ ಎಂದು ಈ ಹಿಂದೆ ಲಿಂಗಸುಗೂರು ಪೊಲೀಸ್ ಠಾಣೆಗೆ ಲಕ್ಕಪ್ಪ ದೂರು ನೀಡಿದ್ದ. ಪೋಕ್ಸೋ ಕಾಯ್ದೆಯಡಿ ಪ್ರಕರಣವೂ ದಾಖಲಾಗಿತ್ತು. ಅನಂತರ ಪೊಲೀಸರು ಹನುಮಂತನನ್ನು ಬಂಧಿಸಿದ್ದರು. ಆಗ ಲಕ್ಕಪ್ಪ ತನ್ನ ಮಗಳು ರೇಣುಕಾಳನ್ನು ಮನೆಗೆ ಕರೆದುಕೊಂಡು ಬಂದಿದ್ದ. ಮೂರು ತಿಂಗಳ ಬಳಿಕ ಹನುಮಂತ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ.
ಬಳಿಕ ಹನುಮಂತ- ರೇಣುಕಾ ಮತ್ತೆ ಪ್ರೀತಿ ಪ್ರೇಮ ಮುಂದುವರಿಸಿದ್ದರು ಎನ್ನಲಾಗಿದೆ. ಇದು ಗೊತ್ತಾಗಿ ‘18 ವರ್ಷ ತುಂಬಿದ ಬಳಿಕ ಸೂಕ್ತ ವರನನ್ನು ನೋಡಿ ನಿನಗೆ ಮದುವೆ ಮಾಡುತ್ತೇವೆ. ಈಗಾಗಲೇ ನಮ್ಮ ಮರ್ಯಾದೆ ಕಳೆದಿದ್ದೀ. ಮತ್ತೆ ಕಳೆಯಬೇಡ’ ಎಂದು ಲಕ್ಕಪ್ಪ ಬುದ್ಧಿ ಹೇಳಿದರೂ ಕೇಳದ ರೇಣುಕಾ 18 ವರ್ಷ ಆದ ಮೇಲೆ ಹನುಮಂತನ ಸಂಗಡ ಹೋಗುತ್ತೇನೆ ಪಟ್ಟು ಹಿಡಿದಿದ್ದಳು ಎನ್ನಲಾಗಿದೆ.
ಕಳೆದ ವರ್ಷ ಮಹಾನವಮಿ ಅಮಾವಾಸ್ಯೆ 15 ದಿನ ಮುಂಚೆ ಅಂದರೆ ಸೆಪ್ಟೆಂಬರ್ 29ರಂದು ತಮ್ಮ ದಾಳಿಂಬೆ ತೋಟದಲ್ಲಿ ತಾಯಿ, ಮಗಳು ಹಾಗೂ ತಂದೆ ಲಕ್ಕಪ್ಪ ಕೆಲಸಕ್ಕೆ ಹೋಗಿದ್ದಾರೆ. ರೇಣುಕಾ ತಾಯಿ ಸಿದ್ದಮ್ಮ ಅಡುಗೆ ಮಾಡಬೇಕೆಂದು ಮನೆಗೆ ಬೇಗನೆ ಹೋಗಿದ್ದಾರೆ. ಆಗ ರೇಣುಕಾ ಮತ್ತು ಲಕ್ಕಪ್ಪ ನಡುವೆ ಪ್ರೀತಿ ವಿಚಾರವಾಗಿ ಮಾತಿಗೆ ಮಾತು ಬೆಳೆದಿದೆ. ರೇಣುಕಾ ತಲೆ ಬಗ್ಗಿಸಿ ಗೋಣಿಗೆ ಲಕ್ಕಪ್ಪ ಜೋರಾಗಿ ಗುದ್ದಿದ್ದಾನೆ. ಹೊಲದ ಬದುವಿನಲ್ಲಿ ಇದ್ದ ಬಂಡೆಗೆ ಬೋರಲು ಬಿದ್ದು ರೇಣುಕಾ ಮೂರ್ಛೆ ಹೋಗಿದ್ದಾಳೆ. ಆಗ ಲಕ್ಕಪ್ಪ ಹಗ್ಗದಿಂದ ಊರಲು ಹಾಕಿ ಸಾಯಿಸಿದ್ದಾನೆ. ಬಳಿಕ ಶವವನ್ನು ಬೈಕ್‌ನಲ್ಲಿ ತೆಗೆದುಕೊಂಡು ಹೋಗಿ ಶೀಲಹಳ್ಳಿ ಬಳಿಯ ಸೇತುವೆ ಮೇಲಿಂದ ಕೃಷ್ಣಾ ನದಿಗೆ ಎಸೆದಿದ್ದಾನೆ. ಅಂದು ರಾತ್ರಿ 12 ಗಂಟೆಗೆ ಮನೆಗೆ ಬಂದ ಲಕ್ಕಪ್ಪ ಹೆಂಡತಿಗೆ ವಿಷಯ ತಿಳಿಸಿ, ಈ ವಿಷಯ ಯಾರಿಗಾದರೂ ಹೇಳಿದರೆ ನಿನಗೂ ಇದೇ ಗತಿ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಪ್ರಕರಣ ಬೆಳಕಿಗೆ ಬಂದದ್ದು ಹೇಗೆ?:
ಇತ್ತ ಹನುಮಂತನ ಮೇಲೆ ದಾಖಲಾಗಿದ್ದ ಪೋಕ್ಸೋ ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಸಮಯದಲ್ಲಿ ಯುವತಿಯನ್ನು ಕೋರ್ಟ್‌ಗೆ ಹಾಜರುಪಡಿಸಲು ನ್ಯಾಯಾಧೀಶರು ಸೂಚಿಸಿದ್ದಾರೆ. ಆಗ 2-3 ಸಲ ಸುಳ್ಳು ಹೇಳಿ ಲಕ್ಕಪ್ಪ ಮನೆಯವರು ತಪ್ಪಿಸಿಕೊಂಡಿದ್ದಾರೆ. ನಂತರ ರೇಣುಕಾಳನ್ನು ಹಾಜರುಪಡಿಸಲೇಬೇಕು ಎಂದು ನ್ಯಾಯಾಧೀಶರು ಕಟ್ಟುನಿಟ್ಟಿನ ಸೂಚನೆ ನೀಡಿದಾಗ ಲಕ್ಕಪ್ಪ ತನ್ನ ಮಗಳು ಕಾಣೆಯಾಗಿರುವುದಾಗಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸುವಂತೆ ಕೋರ್ಟ್ ಆದೇಶಿಸಿದೆ. ಪ್ರಕರಣ ದಾಖಲಿಸಿದ ಪೊಲೀಸರು ಪಾಲಕರನ್ನು ವಿಚಾರಣೆ ನಡೆಸಿದಾಗ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಈಗ ಆರೋಪಿ ತಂದೆ ಲಕ್ಕಪ್ಪನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.