ಸಾರಾಂಶ
ಬೆಂಗಳೂರು : ರಾಜಧಾನಿಯಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ವಿದೇಶಿ ಪ್ರಜೆಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿ, ಆತನಿಂದ ಸುಮಾರು 4 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ಸೋಲದೇವನಹಳ್ಳಿ ಸಮೀಪದ ಅಚ್ಯುತ ನಗರದ ನಿವಾಸಿ ಡೇನಿಯಲ್ ಬಂಧಿತನಾಗಿದ್ದು, ಆರೋಪಿಯಿಂದ 2.856 ಕೆಜಿ ಎಂಡಿಎಂಎ ಕ್ರಿಸ್ಟೆಲ್, ಕಾರು ಹಾಗೂ ಮೊಬೈಲ್ ಸೇರಿದಂತೆ ಒಟ್ಟು 4 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಹಲವು ದಿನಗಳಿಂದ ಡ್ರಗ್ಸ್ ಮಾರಾಟದಲ್ಲಿ ಡೇನಿಯಲ್ ನಿರತನಾಗಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಾದಕ ವಸ್ತು ನಿಗ್ರಹ ದಳದ ಇನ್ಸ್‌ಪೆಕ್ಟರ್ ಎಂ.ಆರ್. ಹರೀಶ್ ತಂಡ, ಆತನ ಮನೆ ಮೇಲೆ ದಾಳಿ ನಡೆಸಿತು. ಕೋಟ್ಯಂತರ ರು. ಮೌಲ್ಯದ ಡ್ರಗ್ಸ್ ಸಮೇತ ಪೆಡ್ಲರ್ ಸಿಸಿಬಿಗೆ ಸಿಕ್ಕಿಬಿದ್ದಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನೈಜೀರಿಯಾ ಮೂಲದ ಡೇನಿಯಲ್, ಎರಡು ವರ್ಷಗಳ ಹಿಂದೆ ಮೂರು ತಿಂಗಳ ಅವಧಿಗೆ ಬ್ಯುಸಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದ. ನಂತರ ನಗರಕ್ಕೆ ಆಗಮಿಸಿ ಅಚ್ಯುತ ನಗರದಲ್ಲಿ ನೆಲೆಸಿದ್ದ ಆತ, ಸುಲಭವಾಗಿ ಹಣ ಸಂಪಾದನೆಗೆ ಡ್ರಗ್ಸ್ ದಂಧೆ ಶುರು ಮಾಡಿದ್ದ. ಕಳೆದ ಏಳೆಂಟು ತಿಂಗಳಿಂದ ಡೇನಿಯಲ್ ಕಾರ್ಯಚಟುವಟಿಕೆ ನಡೆದಿತ್ತು. ತನ್ನ ಪರಿಚಿತ ಪೆಡ್ಲರ್‌ನಿಂದ ಡ್ರಗ್ಸ್ ಖರೀದಿಸಿ ಆನ್‌ಲೈನ್ ಮೂಲಕ ಆತ ಮಾರಾಟ ಮಾಡುತ್ತಿದ್ದ. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಪತ್ತೆಗೆ ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.